ಕೊಪ್ಪಳ: ತೋಟಗಾರಿಕೆ ಇಲಾಖೆಯಿಂದ ನಗರ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಆ.15ರಿಂದ 20ರವರೆಗೆ ಹಮ್ಮಿಕೊಂಡಿದ್ದ ಸಸ್ಯಸಂತೆ ತೆರೆ ಕಂಡಿದ್ದು, 4 ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟವಾಗಿವೆ. ಸುಮಾರು 10,500 ರೈತರ ಭೇಟಿ ನೀಡಿ ತೋಟಗಾರಿಕೆ ಮಾಹಿತಿ ಪಡೆದಿದ್ದಾರೆ.
ಕಳೆದ 6 ವರ್ಷಗಳಿಂದ ನಿರಂತರವಾಗಿ ಸಸ್ಯ ಸಂತೆ ಆಯೋಜಿಸಲಾಗುತ್ತಿದೆ. ಪ್ರತಿ ಬಾರಿ ವಿನೂತನವಾಗಿ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಸಂತೆಯಲ್ಲಿ ಜಗತ್ತಿನ ದುಬಾರಿ ಮಾವು ಎಂದು ಖ್ಯಾತಿಯಾದ ಮಿಕಾಜಾಕಿ ಹಾಗೂ ಮೆಕಾಡೊಮಿಯಾ ಹಣ್ಣಿನ ಸಸಿ ಪ್ರದರ್ಶನ ಮಾಡಲಾಗಿದೆ.
ಸಸಿ ನೋಡಲು ಜಿಲ್ಲೆ ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದ ಹಲವು ರೈತರು ಆಗಮಿಸಿದ್ದು, ಸಸಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಹೂ, ಹಣ್ಣು, ಔಷಧ, ಅಲಂಕಾರಿಕಾ, ತರಕಾರಿ ಸೇರಿ 4 ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟವಾಗಿವೆ. ಜತೆಗೆ ರೈತರು 20 ಲಕ್ಷ ಸಸಿಗಳಿಗೆ ಬೇಡಿಕೆ ಸಲ್ಲಿಸಿರುವುದು ವಿಶೇಷ.
ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಿಸಿದ 5 ಟನ್ ಎರೆಹುಳು ಗೊಬ್ಬರ, 2 ಸಾವಿರ ಲೀಟರ್ ಎರೆ ಜಲ, 5 ಸಾವಿರ ಕೆಜಿ ಬೇವಿನ ಪುಡಿ, 200 ಕೆಜಿ ಜೈವಿಕ ಪರಿಕರಗಳು ಮಾರಾಟವಾಗಿವೆ. ಇದರೊಂದಿಗೆ ರೈತರಿಗೆ ನೀಮಾಸ್ತ್ರ, ಬ್ರಹ್ಮಾಸ್ತ್ರ, ಗೋಕೃಪಾಮೃತ, ಹೂಮಿಕ್ ಆ್ಯಸಿಡ್, ಅಗ್ನಿ ಅಸ್ತ್ರ ತಯಾರಿಕೆ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ.
ಯಾವ್ಯಾವ ಸಸಿ ಮಾರಾಟ: 5 ಸಾವಿರ ಮಾವು, 3 ಸಾವಿರ ಲಿಂಬೆ, 3200 ತೆಂಗು, 2500 ಪೇರಲ, 5 ಸಾವಿರ ನುಗ್ಗೆ, 2 ಸಾವಿರ ಕರಿಬೇವು, 500 ಡಾಗ್ ರಿಡ್ಜ್, 1252 ಗುಲಾಬಿ, 560 ರಾಯಲ್ ಪಾಮ್, 500 ಮನಿಪ್ಲಾಂಟ್, 700 ಅರೇಕಾಪಾಮ್, 2500 ದರಂತಾ, 700 ನಂದಿ ಬಟ್ಟಲು, 800 ಡ್ರೆಸಿನಾ, 400 ತುಳಸಿ, 2500 ದುಂಡು ಮಲ್ಲಿಗೆ ಹಾಗೂ 1 ಲಕ್ಷ ವಿವಿಧ ತರಕಾರಿ ಸಸಿಗಳು ಸೇರಿ ಇತರ ಹಣ್ಣು, ಔಷಧ ಸಸ್ಯಗಳು ಸಸ್ಯ ಸಂತೆಯಲ್ಲಿ ಮಾರಾಟವಾಗಿವೆ.