ಆರ್.ತುಳಸಿಕುಮಾರ್
ಬೆಂಗಳೂರು: ಮಹಾನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಅಪಾಯಕಾರಿಯಾದ ಹಾಗೂ ಟೊಳ್ಳಾದ ಕೊಂಬೆಗಳು ನೆಲಕ್ಕುರುಳುವ ಪ್ರಕರಣಗಳು ಹೆಚ್ಚುತ್ತಿವೆ. ಮಳೆಗಾಲದಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಸಮಸ್ಯೆಯು ಇತ್ತೀಚಿಗೆ ವರ್ಷವಿಡೀ ಕಾಣಲಾರಂಭಿಸಿದೆ. ಅದರಲ್ಲೂ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ ಮರ ಬಿದ್ದು ಮೃತ್ಯ ಸಂಭವಿಸುತ್ತಿದ್ದರೂ, ಬಿಬಿಎಂಪಿ ಮರಗಳ ನಿರ್ವಹಣೆಯಲ್ಲಿ ವೈಫಲ್ಯ ಕಂಡಿದೆ.
ಹಿಂದಿನಿಂದಲೂ ಬೆಂಗಳೂರು ನಗರ ಹವಾಗುಣಕ್ಕೆ ಪ್ರಸಿದ್ಧಿ ಪಡೆದಿದೆ. ವರ್ಷವಿಡೀ ಆಹ್ಲಾದಕರ ವಾತಾವರಣದ ಜತೆಗೆ ಹಸಿರಿನ ಗಿಡ-ಮರಗಳಿಂದ ಕಂಗೊಳಿಸುತ್ತಿದ್ದ ಕಾರಣ ‘ಗಾರ್ಡನ್ ಸಿಟಿ’ ಎಂಬ ಹೆಗ್ಗಳಿಕೆ ಪಡೆದಿದೆ. ಈ ಖ್ಯಾತಿಯನ್ನು ಉಳಿಸಿಕೊಳ್ಳುವ ಭರದಲ್ಲಿ ಸ್ಥಳೀಯ ಹವಾಗುಣಕ್ಕೆ ಹೊಂದದ ಹಾಗೂ ಬೇಗನೆ ಬೆಳವಣಿಗೆ ಕಾಣುವ ಸಸಿಗಳನ್ನು ನೆಡುವ ಪರಿಪಾಠ ಅಕ್ಷರಶ: ಸಂಕಷ್ಟ ತಂದೊಡ್ಡಿದೆ.
ಬಿಬಿಎಂಪಿ ಸೇರಿ ವಿವಿಧ ಸಂಘ-ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಮಳೆಗಾಲದಲ್ಲಿ ಹೆಚ್ಚಾಗಿ ನಡೆಯುವ ವನಮಹೋತ್ಸವ ವಾರ್ಷಿಕ ಈವೆಂಟ್ ಆಗಿ ಮಾರ್ಪಾಡಾಗಿದೆ. ಕೆಲವೆಡೆ ಅಲಂಕಾರಕ್ಕಾಗಿ ಹಾಗೂ ಬೇಗನೆ ಮರ ಬೆಳೆಸಲು ವಿದೇಶಿ ಪ್ರಭೇದದ ಗಿಡಗಳನ್ನು ಬೆಳೆಸಲಾಗುತ್ತಿದೆ. ಇವು ಬೆಳೆದು ಹೆಮ್ಮರವಾದ ಕೆಲವೇ ವರ್ಷಗಳಲ್ಲಿ ಟೊಂಗೆಗಳು ಮುರಿದು ಬೀಳುತ್ತಿವೆ. ಹಲವೆಡೆ ಕಟ್ಟಡಗಳಿಗೆ ಚಾಚಿಕೊಳ್ಳುವ ಕಾರಣಕ್ಕೆ ಬಿಲ್ಡಿಂಗ್ ಮಾಲೀಕರು ರೆಂಬೆಗಳನ್ನು ಕಡಿಯುವುದುಂಟು. ಇನ್ನೂ ಕೆಲವು ಮಳಿಗೆಗಳ ನಾಮಲಕ ಕಾಣುತ್ತಿಲ್ಲವೆಂಬ ಕಾರಣಕ್ಕೆ ರಾತ್ರೋ ರಾತ್ರಿ ಮರಗಳನ್ನು ಕತ್ತರಿಸಲಾಗುತ್ತಿದೆ.
ಕ್ಷಿಪ್ರ ಬೆಳವಣಿಗೆಯ ಸಸಿಗಳಿಗೆ ಬೇಡಿಕೆ:
ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ನಗರದ ಹೆಚ್ಚಿನ ಕಡೆಗಳಲ್ಲಿ ನರ್ಸರಿಗಳನ್ನು ಹೊಂದಿವೆ. ನಿರ್ದಿಷ್ಟ ಪ್ರಭೇದದ ಗಿಡಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಸುವ ಕಾರ್ಯಕ್ರಮಕ್ಕೂ ಉಚಿತವಾಗಿಯೇ ವಿತರಿಸಲಾಗುತ್ತಿದೆ. ಇದರ ಜತೆಗೆ ಹೊಸದಾಗಿ ಮನೆ ನಿರ್ಮಿಸುವ ಜನರು ಬೇಗನೆ ಬೆಳೆಯುವ ಸಸಿಗಳನ್ನು ನೆಡುವುದುಂಟು. ಜತೆಗೆ ಸಾರ್ವಜನಿಕರಿಂದ ರಸ್ತೆಬದಿ ಟಬೂಬಿಯಾ, ಮಹಾಗನಿ ಒತ್ಯಾದಿ ಪ್ರಭೇದದ ಸಸಿಗಳನ್ನೇ ನೆಡುವಂತೆ ಒತ್ತಾಯ ಬರುತ್ತಿದೆ. ಈ ಬೇಡಿಕೆ ಈಡೇರಿಸುವ ಜತೆಗೆ ದೇಶಿ ಗಿಡಗಳನ್ನೂ ನೆಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ನಡೆಗೆ ತಜ್ಞರ ಆಕ್ಷೇಪ:
ಬೆಂಗಳೂರು ಇತರ ನಗರಗಳಿಗಿಂತ ಭಿನ್ನ ವಾತಾವರಣ ಹೊಂದಿದೆ. ವರ್ಷದ 6 ತಿಂಗಳು ಮಳೆ ಬೀಳುವ ಇಲ್ಲಿ ಮರಗಳ ಬೇರುಗಳು ಆಳಕ್ಕೆ ಇಳಿಯುವ ಪ್ರಭೇದಗಳನ್ನೇ ನೆಡಲು ಆಯ್ಕೆ ಮಾಡಿಕೊಳ್ಳಬೇಕು. ರಸ್ತೆಬದಿ ನಿರ್ದಿಷ್ಟ ಜಾತಿಯ ಸಸಿಗಳನ್ನು ಮಾತ್ರ ಹಾಕಬೇಕು. ಫುಟ್‌ಪಾತ್‌ನಲ್ಲಿ ಜನರ ಓಡಾಟಕ್ಕೆ ಅಡ್ಡಿಯಾಗದ ಮಧ್ಯಮ ಗಾತ್ರದ ಮರಗಳನ್ನು ಬೆಳೆಸಬೇಕು. ಅಲಂಕಾರಕ್ಕಾಗಿ ಬೆಳೆಸಬೇಕೆಂದರೆ ಪಾರ್ಕ್‌ಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಬೆಳೆಸಬೇಕು. ಮುಖ್ಯವಾಗಿ ಮಳೆಗಾಲ ಆರಂಭಕ್ಕೂ ಮುನ್ನ ವಾರ್ಷಿಕ ನಿರ್ವಹಣೆ ರೂಪದಲ್ಲಿ ಮರಗಳ ಟ್ರಿಮ್ಮಿಂಗ್ ಮಾಡಬೇಕು. ಆದರೆ, ಈ ಅಂಶಗಳನ್ನು ಪರಿಗಣಿಸದೆ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದಾರೆ. ಸಂಖ್ಯೆ ಹೆಚ್ಚಿಸುವ ಸಲುವಾಗಿ ಸಸಿಗಳನ್ನು ನೆಡುತ್ತಿರುವ ಕಾರಣ ಅವು ಜನರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ ಎಂಬುದಾಗಿ ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಸ್ಕಾಂನಿಂದ ಮರಗಳಿಗೆ ಕೊಡಲಿ:
ನಗರದೆಲ್ಲೆಡೆ ಹಾದುಹೋಗಿರುವ ವಿದ್ಯುತ್ ಮಾರ್ಗಗಳ ಬಳಿಯಿರುವ ರಸ್ತೆಬದಿ ಮರಗಳನ್ನು ಬೆಳೆಸಲಾಗಿದೆ. ಇವುಗಳು ಬೆಳೆದು ತಂತಿಗೆ ಅಡ್ಡಿಯುಂಟು ಮಾಡುತ್ತಿವೆ ಎಂಬ ಕಾರಣಕ್ಕೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿ ವರ್ಷಕ್ಕೆ ಎರಡು ಬಾರಿ ಟೊಂಗೆಗಳನ್ನು ಕತ್ತರಿಸುವುದುಂಟು. ಇಂತಹ ಪ್ರಕರಣಗಳಲ್ಲಿ ಗಿಡಗಳ ಹೆಚ್ಚಿನ ಭಾಗಕ್ಕೆ ಕೊಡಲಿ ಹಾಕಲಾಗುತ್ತಿದೆ. ಈ ಗಿಡ-ಮರಗಳು ನಂತರದಲ್ಲಿ ಒಣಗಿ ನೆಲಕ್ಕುರುಳಿರುವ ಪ್ರಕರಣಗಳು ನಡೆಯುತ್ತಿವೆ.
ದೇಶಿ ಗಿಡ ನೆಡಲು ಕ್ರಮ:
ಇತ್ತೀಚಿನ ವರ್ಷಗಳಲ್ಲಿ ನಗರದ ವಿವಿಧೆಡೆ ದೇಶಿ ಗಿಡಗಳನ್ನೇ ನೆಡುವಂತೆ ಅರಣ್ಯ ಇಲಾಖೆಯು ಸರ್ಕಾರದ ಸಂಸ್ಥೆಗಳಿಗೆ ಸೂಚಿಸಿದೆ. ಇದರನ್ವಯ ಬಿಬಿಎಂಪಿ ಹಾಗೂ ಬಿಡಿಎ ಸ್ಥಳೀಯ ಪ್ರಭೇದದ ಗಿಡಗಳನ್ನು ನೆಡಲಾರಂಭಿಸಿದೆ. ಹೊಂಗೆ, ಮಾವು, ಬೇವು, ಆಲ, ಹಲಸು, ನೆಲ್ಲಿ, ಗೋಣಿ, ನೇರಳೆ, ಸಂಪಿಗೆ ಗಿಡಗಳನ್ನು ಹೆಚ್ಚಾಗಿ ನೆಡಲಾಗುತ್ತಿದೆ. ಇವುಗಳನ್ನು ಪಾರ್ಕ್ ಹಾಗೂ ಕೆರೆ ಪ್ರದೇಶದಲ್ಲಿ ನೆಡಲು ಆದ್ಯತೆ ನೀಡಲಾಗುತ್ತಿದೆ.
ಬಿಇಟಿಯಿಂದ ದೇಶಿ ವೃಕ್ಷ ಆಂದೋಲನ:
ರಾಜಧಾನಿಯಲ್ಲಿ ಸ್ಥಳೀಯ ಮರಗಳನ್ನು ಬೆಳೆಸುವ ಸಲುವಾಗಿಯೇ ‘ಬೆಂಗಳೂರು ಪರಿಸರ ಟ್ರಸ್ಟ್’ (ಬಿಇಟಿ) ದೇಶಿ ವೃಕ್ಷ ಆಂದೋಲನ ಕೈಗೊಂಡಿದೆ. ದಶಕದಿಂದ ನಡೆದಿರುವ ಈ ಕಾರ್ಯ ಈಗಲೂ ಮುಂದುವರಿದಿದೆ. ಈಗಾಗಲೇ ಆರ್.ಆರ್.ನಗರ, ಆಡುಗೋಡಿ ಪೊಲೀಸ್ ವಸತಿಗೃಹ, ಮೈಸೂರು ರಸ್ತೆಯ ಕವಾಯತು ಮೈದಾನ ಇತ್ಯಾದಿ ಸ್ಥಳಗಳಲ್ಲಿ 3 ಲಕ್ಷ ಗಿಡಗಳನ್ನು ನೆಡಲಾಗಿದೆ. ಸೇನೆ ಕೂಡ ತನ್ನ ಕ್ಯಾಂಪಸ್ ಪ್ರದೇಶದಲ್ಲಿ ದೇಶಿ ಪ್ರಭೇದದ ಸಸಿಗಳನ್ನು ನೆಡುವಲ್ಲಿ ನಿರತವಾಗಿದೆ.
ಮರಗಳ ಸುತ್ತ ಕಾಂಕ್ರೀಟ್ ತೆರವಿಗೆ ಸೂಚನೆ:
ನಗರದಲ್ಲಿ ರಸ್ತೆಬದಿಯಿರುವ ಮರಗಳ ಸುತ್ತ ಕಾಂಕ್ರೀಟ್, ಕಲ್ಲು ಹಾಗೂ ಸಿಮೆಂಟ್ ಬ್ಲಾಕ್‌ಗಳನ್ನು ಹಾಕಿ ಅವುಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಇವುಗಳನ್ನು ತೆರವುಗೊಳಿಸುವಂತೆ ಪರಿಸರವಾದಿಗಳು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಇತ್ತೀಚಿಗೆ ಸರ್ಕಾರ ಆದೇಶ ಹೊರಡಿಸಿ ಮರ ಬೆಳವಣಿಗೆಗೆ ಅಡ್ಡಿಯಾಗುವ ವಸ್ತುಗಳನ್ನು ತೆರವಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಕೂಡ ಪ್ರತ್ಯೇಕ ಆದೇಶ ಹೊರಡಿಸಿ ಪಾದಚಾರಿ ಮಾರ್ಗಗಳಲ್ಲಿರುವ ಅಂತಹ ಮರಗಳ 1 ಮೀಟರ್ ಸುತ್ತ ಇರುವ ಸಿಮೆಂಟ್, ಕಲ್ಲುಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಬೆಂಗಳೂರಿನಲ್ಲಿ ಹಸಿರು ಬೆಳೆಸುವ ವಿಚಾರದಲ್ಲಿ ಸಮರ್ಪಕವಾದ ಕೆಲಸ ಆಗುತ್ತಿಲ್ಲ. ಜೀವ ಜಲ, ಪ್ರಾಣ ವಾಯು ವಿಚಾರದಲ್ಲಿ ಅಧಿಕಾರಿ ವರ್ಗಕ್ಕೆ ಸ್ಪಷ್ಟ ಆಲೋಚನೆ ಇಲ್ಲ. ತಾವಿರುವಷ್ಟು ದಿನ ಕೆಲಸ ಆಗಲಿ ಎಂಬುದಷ್ಟೇ ಆಫೀಸರ್ಸ್ ಲೆಕ್ಕಾಚಾರದಿಂದಾಗಿ ಸಸಿ ನೆಡುವಿಕೆ ಸ್ಪಷ್ಟ ಹಾದಿಯಲ್ಲಿ ಸಾಗುತ್ತಿಲ್ಲ. ದೇಶಿ ಗಿಡಗಳನ್ನು ಬೆಳೆಸಿದರಷ್ಟೇ ನಗರಕ್ಕೆ, ಜನರಿಗೆ ಅನುಕೂಲ. ಪಶು-ಪಕ್ಷಿಗಳಿಗೂ ಆಹಾರ, ಆಶ್ರಯ ನೀಡುವ ರುದ್ರಾಕ್ಷ, ಕದಂಬ, ಬೇವು ಸೇರಿ ಆಮ್ಲಜನಕ ಉತ್ಪತ್ತಿ ಮಾಡುವ ಪ್ರಭೇದಗಳ ಮರಗಳನ್ನೇ ನೆಡಲು ಆದ್ಯತೆ ಸಿಗಲಿ.
- ಅ.ನಾ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ
ಪ್ರಾಧಿಕಾರದ ಬಡಾವಣೆಗಳಲ್ಲಿ ಹೆಚ್ಚಾಗಿ ಸ್ಥಳೀಯ ಪ್ರಭೇದದ ಗಿಡಗಳನ್ನು ಬೆಳೆಸಲಾಗುತ್ತಿದೆ. ಹೊಸ ಲೇಔಟ್‌ಗಳಲ್ಲೂ ಹೊಂಗೆ, ಮಾವು, ಬೇವು, ಸಂಪಿಗೆ ಸಸಿಗಳನ್ನು ನೆಡಲು ಆದ್ಯತೆ ನೀಡಿದ್ದೇವೆ. ಈ ವರ್ಷ ಕೆಂಪೇಗೌಡ ಬಡಾವಣೆಯ ಉದ್ಯಾನ, ಕೆರೆಗಳ ಬಫರ್ ಜಾಗದಲ್ಲಿ 30 ಸಾವಿರ ದೇಶಿ ಸಸಿಗಳನ್ನು ನೆಡಲಿದ್ದೇವೆ.
- ಚರಣ್, ಬಿಡಿಎ ಡಿಸಿಎಫ್
ಇತ್ತೀಚಿಗೆ ಪಾಲಿಕೆಯಿಂದ ವಿದೇಶಿ ಮರಗಳನ್ನು ಬೆಳೆಸುವುದನ್ನು ಕಡಿಮೆ ಮಾಡಲಾಗಿದೆ. ಆದರೂ, ಕೆಲವೆಡೆ ಅನಿವಾರ್ಯವಾಗಿ ಅಂತಹ ಸಸಿಗಳನ್ನು ನೆಡಬೇಕಾಗುತ್ತದೆ. ಪಾರ್ಕ್, ಲೇಕ್, ಪಾಲಿಕೆಯ ಖಾಲಿ ಜಾಗಗಳಲ್ಲಿ ಸಸಿ ನೆಡುವ ಕಾರ್ಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆ, ಕಚೇರಿ ಮುಂದಿನ ಮರಗಳ ಟೊಂಗೆಗಳನ್ನು ಕತ್ತರಿಸುವಂತೆ ಹೆಚ್ಚಿನ ಮನವಿ ಬಂದಿದ್ದು, ಸ್ಥಳಪರಿಶೀಲನೆ ನಡೆಸಿಯೇ ಕ್ರಮ ಕೈಗೊಳ್ಳುತ್ತೇವೆ.
- ಬಿ.ಎಲ್.ಜಿ.ಸ್ವಾಮಿ, ಬಿಬಿಎಂಪಿ ಡಿಸಿಎಫ್