ಜಿಲ್ಲೆ

ವಿದ್ಯಾರ್ಥಿಗಳ ಕಲಿಕೆಗೆ ಹಸರೀಕರಣ ಪೂರಕ

ಧನಂಜಯ ಎಸ್.ಹಕಾರಿ.

ಚಳ್ಳಕೆರೆ: ಹಸಿರೀಕರಣ ಪರಿಸರ, ವಿದ್ಯಾರ್ಥಿಗಳ ಕಲಿಕೆಯ ಲವಲವಿಕೆಗೆ ಪೂರಕವಾಗಿರುತ್ತದೆ ಎಂದು ಪ್ರಾಚಾರ್ಯ ಎಂ. ರವೀಶ್ ಅಭಿಪ್ರಾಯಪಟ್ಟರು.

ನಗರದ ಸೋಮಗುದ್ದು ರಸ್ತೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸೇವಾ ಘಟಕ ಶನಿವಾರ ಹಮ್ಮಿಕೊಂಡಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಕಾಲೇಜಿನಲ್ಲಿ 1400 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಸುಸಜ್ಜಿತವಾದ ಕೊಠಡಿಗಳ ವ್ಯವಸ್ಥೆ ಜತೆಯಲ್ಲಿ ವಿಶಾಲವಾದ ಪರಿಸರವಿದೆ ಎಂದರು.

ಕಾಲೇಜು ಆವರಣದಲ್ಲಿ ಈಗಾಗಲೇ 350 ಗಿಡಗಳು ವಿದ್ಯಾರ್ಥಿಗಳ ಕಾಳಜಿಯಿಂದ ದೊಡ್ಡ ಮರಗಳಾಗಿವೆ. ಪ್ರಸ್ತುತ ನಾಟಿ ಮಾಡುತ್ತಿರುವ 50ಕ್ಕೂ ಹೆಚ್ಚು ಗಿಡಗಳನ್ನು ಶ್ರದ್ಧೆಯಿಂದ ಪೋಷಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ಕಿವಿಮಾತು ಹೇಳಿದರು.

ಎನ್ನೆಸ್ಸೆಸ್ ಅಧಿಕಾರಿ ಬಿ.ಶಾಂತಕುಮಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಇರಬೇಕು. ಕಾಲೇಜಿನ ಆವರಣದಲ್ಲಿ ಮಾನಸಿಕ ನೆಮ್ಮದಿ ಮತ್ತು ಕಲಿಕೆಗೆ ಪೂರಕವಾಗಿ ಗಿಡಮರಗಳ ವಾತಾವರಣ ನಿರ್ಮಿಸಿರುವುದು ಉತ್ತಮವಾಗಿದೆ.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಲಿಕೆಯ ಪರಿಪೂರ್ಣತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಉಪನ್ಯಾಸಕರಾದ ಕೆ.ವಿ.ಚಂದ್ರಶೇಖರ್, ಎಸ್.ರವಿಕುಮಾರ್, ಎನ್.ಈರಣ್ಣ, ಜಾನಕಿ, ಮಹಾಂತೇಶ್, ಅಬೀಬುಲ್ಲಾ, ಬೆಳಗಟ್ಟ ನಾಗರಾಜ, ಲೋಕೇಶ್, ಮಂಜುನಾಥ್ ಇತರರಿದ್ದರು.