ಕೆ.ಆರ್.ನಗರದ ಕನಕನಗರ ಬಡಾವಣೆಯ ಉದ್ಯಾನದಲ್ಲಿ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ವನ ಮಹೋತ್ಸವ ಕಾರ್ಯಕ್ರಮಕ್ಕೆ ಪೌರಕಾರ್ಮಿಕರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಡಾ.ಜಯಣ್ಣ, ಎಂ.ಆರ್.ರಶ್ಮಿ, ಕೆ.ಎಸ್.ಮಂಜುನಾಥ್, ನಟರಾಜ್ ಇನ್ನಿತರರು ಇದ್ದರು. 
ಜಿಲ್ಲೆ

ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸಿ

ಕೆ.ಆರ್.ನಗರ: ಪ್ರತಿಯೊಬ್ಬ ನಾಗರಿಕನು ಗಿಡ-ಮರಗಳನ್ನು ಬೆಳೆಸಿ ಉಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಹೊಂದಿದ್ದು ಅದರಂತೆ ಎಲ್ಲರೂ ನಡೆಯೋಣ ಎಂದು ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ ಹೇಳಿದರು.

ಪಟ್ಟಣದ ಕನಕನಗರ ಬಡಾವಣೆ ಉದ್ಯಾನದಲ್ಲಿ ಸೋಮವಾರ ಅರಣ್ಯ ಇಲಾಖೆ ಮತ್ತು ಪುರಸಭೆಯ ವತಿಯಿಂದ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಮೂಲಕ ಸಸಿಗಳನ್ನು ನೆಡಿಸಿ ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ನಾಕರಿಕರು ತಮ್ಮ ತಾಯಿಯ ಹೆಸರಿನಲ್ಲಿ ನೆನಪಿಗಾಗಿ ಒಂದು ಗಿಡ ನೆಟ್ಟು ಬೆಳೆಸುವಂತೆ ನಮ್ಮ ದೇಶದ ಪ್ರಧಾನಿ ಘೋಷವಾಕ್ಯವಾಗಿದೆ. ಅದನ್ನು ಪಾಲಿಸಬೇಕು ಎಂದರು.

ಪರಿಸರದಲ್ಲಿ ಕಣ್ಣಿಗೆ ಕಾಣುವ ಕಸವನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ. ಆದರೆ ಕಣ್ಣಿಗೆ ಕಾಣದ ಕಸವನ್ನ ಪರಿಸರವೇ ಸ್ವಚ್ಛಗೊಳಿಸುತ್ತದೆ. ಅದಕ್ಕಾಗಿ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಬೇಕು ಎಂಬ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನೆಟ್ಟಿರುವ ಸಸಿಗಳನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ಸ್ಥಳೀಯರ ಮೇಲಿದೆ ಎಂದು ತಿಳಿಸಿದರು.

ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿ, ನಗರೀಕರಣದ ಹೆಸರಿನಲ್ಲಿ ಕಾಂಕ್ರೀಟ್‌ಕರಣ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ ನಮ್ಮ ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗಬೇಕಾಗಿದೆ. ಇಂದು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಸಸಿಗಳನ್ನು ವಿತರಿಸುವುದು ಬಹು ಮುಖ್ಯವಾಗಿದೆ ಎಂದರು.

ಪುರಸಭಾ ಸದಸ್ಯ ನಟರಾಜ್ ಮಾತನಾಡಿ, ಪ್ರಕೃತಿಯನ್ನು ಉಳಿಸುವ ಮಹತ್ವದ ಉದ್ದೇಶವನ್ನು ಪುರಸಭೆ ಮತ್ತು ಅರಣ್ಯ ಇಲಾಖೆ ಮಾಡುತ್ತಿದೆ. ವಾರ್ಡಿನ ಮೂಲ ಸೌಕರ್ಯಗಳಲ್ಲಿ ಒಂದಾದ ಪಾರ್ಕ್ ಅಭಿವೃದ್ಧಿ ನಮ್ಮ ಬಡಾವಣೆಯ ನಿವಾಸಿಗಳ ಕನಸಾಗಿದ್ದು ಇಂದು ಅದು ನೆರವೇರುತ್ತಿದೆ. ಮುಂದಿನ ದಿನಗಳಲ್ಲಿ ಈ ಬಡಾವಣೆಯಲ್ಲಿರುವ ಎಲ್ಲಾ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.

ನಮ್ಮ ಮನವಿಯಂತೆ ಅಭಿವೃದ್ಧಿಗೆ ಪೂರಕವಾಗಿ ಶಾಸಕ ಡಿ.ರವಿಶಂಕರ್ ರವರು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶರವರಿಂದ ಪಟ್ಟಣದಲ್ಲಿ ಅಭಿವೃದ್ಧಿ ಹೊಂದದ ಉದ್ಯಾನಗಳ ಅಭಿವೃದ್ಧಿಗೆ 3 ಕೋಟಿ ರೂಪಾಯಿಗಳ ಅನುಧಾನ ತಂದಿದ್ದಾರೆ. ಇದರಿಂದ ನಮ್ಮ ಬಡಾವಣೆಗೆ ಹೆಚ್ಚಿನ ಅನುಧಾನ ದೊರೆಯಲಿದ್ದು ಅವರಿಗೆ ಸ್ಥಳೀಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಪುರಸಭಾ ಆರೋಗ್ಯ ನಿರೀಕ್ಷಕ ರಾಜೇಂದ್ರ, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಪುರಸಭಾ ಸಿಬ್ಬಂದಿ ಮಹದೇವ, ಕರ್ಪ, ಕುಮಾರ, ಪಿ.ಮಹದೇವ, ಪಳನಿ, ರಾಮಕ್ಕ, ಚಂದ್ರಿಕಾ, ಎಸ್.ಬಸವರಾಜು, ಪುಟ್ಟರಾಜು, ನಾಗರಾಜು, ದೊಡ್ಡೇಗೌಡ, ಪುಟ್ಟೇಗೌಡ, ಚಂದಗಾಲು ಮಹದೇವ್ ಮತ್ತಿತರರು ಹಾಜರಿದ್ದರು.