ಸಿಂಧನೂರು: ಎಡಿಬಿ ನೆರವಿನ ಕೆಯುಐಡಿಎಫ್‌ಸಿ ಯೋಜನೆಯಡಿ ಉದ್ದೇಶಿತ ಕುಡಿವ ನೀರಿನ ಯೋಜನೆ ಪೂರ್ಣಗೊಂಡು ಕೆರೆಗೆ ನೀರು ಬೀಳುತ್ತಿದ್ದರೂ ನಗರದ ನಿವಾಸಿಗರಿಗೆ ದೊರೆಯುತ್ತಿಲ್ಲ.
ಇದನ್ನೂ ಓದಿ: ಆಂಧ್ರದಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ 5000 ರೂ. ಘೋಷಣೆ: ಕರ್ನಾಟಕದಲ್ಲೂ ಈ ಮೊತ್ತ ಹೆಚ್ಚಸಲಿದೆಯೇ ಕಾಂಗ್ರೆಸ್?
2002-03ರಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಡಿ ಉತ್ತರ ವಲಯ ಬಂಡವಾಳ ಹೂಡಿಕೆ ಯೋಜನೆಯಡಿ 99 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ ಕುಡಿವ ನೀರಿನ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು.
ಆಗ ಐದು ಕೋಟಿ ರೂ. ವಂತಿಗೆ ಕಟ್ಟಲು ಹಿಂಜರಿದ ಕಾರಣ ನನೆಗುದಿಗೆ ಬಿದ್ದ ಈ ಯೋಜನೆಗೆ 2005-06ರಲ್ಲಿ ಮರುಜೀವ ದೊರೆಯಿತು. ನಂತರ ಟೆಂಡರ್ ಪ್ರಕ್ರಿಯೆಗಳಲ್ಲಿ ಮೂರು ಬಾರಿ ರದ್ದಾಯಿತು.
ನಂತರ 2014ರ ಡಿ.1ರಂದು ಟೆಂಡರ್ ಆಗಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ತುರ್ವಿಹಾಳ ಹತ್ತಿರದ 250 ಎಕರೆಯಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣ ಶುರುವಾಯಿತು. ಅಲ್ಲೂ ಲೋಪವಾಗಿ ಕೇವಲ 140 ಎಕರೆಯಲ್ಲಷ್ಟೇ ಕೆರೆ ನಿರ್ಮಾಣವಾಗಿದೆ.
ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಉಳಿದ ಕಾಮಗಾರಿಗಳು ಅರೆಬರೆ ಉಳಿಸಿದ್ದು, ಇನ್ನೂ ಶೇ.20 ಬಾಕಿ ಉಳಿದಿದೆ. ಕಳೆದ ವರ್ಷವೇ ನಗರಕ್ಕೆ 24/7 ಕುಡಿವ ನೀರು ಪೂರೈಕೆ ಮಾಡುವುದಾಗಿ ಉಸ್ತುವಾರಿ ಹೊತ್ತ ಇಲಾಖೆ ಭರವಸೆ ನೀಡಿತ್ತು.
ಆದರೆ, ಆರಂಭದಿಂದಲೂ ವಿಘ್ನ ಎದುರಾಗಿದ್ದರಿಂದ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿಯಲ್ಲಾದ ವಿಳಂಬ, ಲೋಪ ಕುರಿತಂತೆ ಮೇಲಧಿಕಾರಿಗಳಿಗೆ ಸಚಿವರು ಛೀಮಾರಿ ಹಾಕಿದ್ದರೂ ಕಾಮಗಾರಿ ಮುಗಿಸುವ ಡೆಡ್‌ಲೈನ್ ವಿಸ್ತರಣೆಯಾಗುತ್ತಲೇ ಇದೆ.
ಕಳೆದ ಸರ್ಕಾರ ಅವಧಿಯಲ್ಲಿ ಆಗಿನ ಶಾಸಕ ವೆಂಕಟರಾವ್ ನಾಡಗೌಡ ಒತ್ತಡದ ಮೇರೆಗೆ ಕುಡಿವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿ ಬಗ್ಗೆಯೇ ಪ್ರತ್ಯೇಕ ಕೆಯುಐಡಿಎಫ್‌ಸಿ ಮೇಲಧಿಕಾರಿಗಳನ್ನೊಳಗೊಂಡ ಸಭೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ನಡೆಸಿದ್ದು,
ಈಗಾಗಲೇ ಕಾಮಗಾರಿ ವಿಳಂಬವಾಗಿರುವ ಮತ್ತು ಮೂರ‌್ನಾಲ್ಕು ಬಾರಿ ಡೆಡ್‌ಲೈನ್ ಮುಗಿದಿರುವ ಬಗ್ಗೆ ಅಧಿಕಾರಿಗಳ ಜತೆಗೆ ಸುದೀರ್ಘ ಚರ್ಚೆ ನಡೆಸಲಾಗಿತ್ತು.
ಕಾಮಗಾರಿ ಮುಗಿಸಿರುವ ಬಗ್ಗೆ ಅಧಿಕಾರಿಗಳು ನೀಡಿರುವ ಮಾಹಿತಿ ತಪ್ಪಿದೆ. ಶೇ.90 ಕಾಮಗಾರಿ ಮುಗಿಸಿದ್ದಾಗಿ ಹೇಳಲಾಗಿದೆ. ವಾಸ್ತವದಲ್ಲಿ ಬಹಳಷ್ಟು ಕಾಮಗಾರಿ ಉಳಿದಿದೆಂದು ದೂರಿದ್ದಾರೆ.
ಕೊನೆಗೂ ಸಚಿವ ಬೈರತಿ ಬಸವರಾಜ, ಏಪ್ರಿಲ್ ಒಳಗೆ ನೀರು ಹಾಗೂ ಯುಜಿಡಿ ಕಾಮಗಾರಿ ಮುಗಿಸಬೇಕು. ಕಳೆದ ಮೇನಲ್ಲಿ ಉದ್ಘಾಟನೆಗೊಳ್ಳಬೇಕೆಂಬ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ, ಬೇಡಿಕೆ ಮಾತ್ರ ಈಡೇರಲಿಲ್ಲ.
ಸಿಂಧನೂರಿನ 24/7 ಕುಡಿವ ನೀರು ಹಾಗೂ ಯುಜಿಡಿ ಕಾಮಗಾರಿ ಬಗ್ಗೆ ಈಗಾಗಲೇ ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ ಪಡೆದಿದ್ದು, ನಿರಂತರ ಕುಡಿವ ನೀರು ಹಾಗೂ ಯುಜಿಡಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಚರ್ಚೆ ನಡೆಯುತ್ತಿದೆ. ನಗರಕ್ಕೆ ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಲಾಗಿದೆ.ಮಂಜುನಾಥ ಗುಂಡೂರುಪೌರಾಯುಕ್ತ ನಗರಸಭೆ, ಸಿಂಧನೂರು.ಸಿಂಧನೂರಿಗೆ 24/7 ಕುಡಿವ ನೀರಿನ ಯೋಜನೆ ಹಾಗೂ ಯುಜಿಡಿ ಮಹತ್ವದ ಯೋಜನೆಗಳಾಗಿದ್ದು, ನಾನು ಶಾಸಕನಾಗಿದ್ದಾಗ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನ ಮಾಡಿರುವೆ. ಇನ್ನೂ ಸ್ವಲ್ಪ ಕಾಮಗಾರಿ ಉಳಿದಿದ್ದು ಮುಗಿಸಲು ಸಾಧ್ಯವಾಗಿಲ್ಲ. ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿರುವೆ.ಹಂಪನಗೌಡ ಬಾದರ್ಲಿಶಾಸಕ, ಸಿಂಧನೂರು.