ಹಾವೇರಿ: ಪ್ಯಾರೀಷ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ರಾಜ್ಯದ 75ಕ್ರೀಡಾಪಟುಗಳಿಗೆ ವಿಶ್ವ ಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಪದಕಗಳನ್ನು ಗೆಲ್ಲಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿಗ್ಗಾಂವಿ ತಾಲೂಕಿನ ಹನಮರಹಳ್ಳಿ ಗ್ರಾಮದಲ್ಲಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಗ್ಗಾಂವಿ ತಾಪಂ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಜಿಲ್ಲಾ ಗ್ರಾಮೀಣ ಕ್ರೀಡಾಕೂಟಕ್ಕೆ ಬೆಂಗಳೂರಿನಿಂದ ವರ್ಚುವಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದಲೇ ವ್ಯವಸ್ಥಿತವಾಗಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಈ ದಿನ ಗ್ರಾಮೀಣ ಕ್ರೀಡಾಕೂಟಕ್ಕೆ ಎಲ್ಲೆಡೆ ಚಾಲನೆ ನೀಡಲಾಗಿದೆ. ಕಬಡ್ಡಿ, ಖೋಖೋ, ಕಂಬಳ, ಎತ್ತಿನಗಾಡಿನ ಸ್ಪರ್ಧೆ ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಸಾರುತ್ತವೆ. ಗ್ರಾಪಂ ಮಟ್ಟದಿಂದ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಗ್ರಾಮೀಣ ಕ್ರೀಡಾಸ್ಪರ್ಧೆಗಳು ನಡೆಯುತ್ತವೆ. ಗ್ರಾಮದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಹೊಡೆಯುವ ಸ್ಪರ್ಧೆ, ಕುಸ್ತಿ, ಸೈಕಲ್, ಮೋಟಾರ್ ಸೈಕಲ್, ಕಾರ್ ರ್ಯಾಲಿಗಳು, ಗಾಲ್ಪ್, ವಾಲಿಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕನ್ನಡದ ಯುವಕರು ಯಶಸ್ಸಿನ ಉತ್ತುಂಗಕ್ಕೆ ಏರಬೇಕು. ಸೀನಿಯರ್ ಒಲಿಂಪಿಕ್ಸ್ ಏರ್ಪಡಿಸಲು ರಾಜ್ಯ ಸರ್ಕಾರ 8 ಕೋಟಿ ರೂ.ಗಳನ್ನು ನೀಡಿದೆ. ಕ್ರೀಡಾ ಕರ್ನಾಟಕವನ್ನಾಗಿ ಮಾಡುವ ಗುರಿ ರಾಜ್ಯ ಸರ್ಕಾರಕ್ಕಿದೆ. ಕ್ರೀಡೆಯ ತರಬೇತುದಾರರಿಗೆ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಸರ್ಕಾರದ ಪ್ರೋತ್ಸಾಹ: ಧ್ಯಾನ್ಚಂದ್ ಅವರು ಒಲಿಂಪಿಕ್ಸ್ನಲ್ಲಿ 3 ಬಾರಿ ಚಿನ್ನದ ಪದಕ ಗೆದ್ದು, ಭಾರತಕ್ಕೆ ಕೀರ್ತಿ ತಂದಿದ್ದಾರೆ. ಹಾಕಿಯ ಜಾದೂಗಾರರಾಗಿದ್ದ ಅವರು ಹಾಕಿಯನ್ನು ಅಗ್ರಮಾನ್ಯ ಸ್ಥಾನಕ್ಕೆ ತಂದರು. ಧ್ಯಾನ್ಚಂದ್ ಅವರ ಹೆಸರಿನಲ್ಲಿ ಖೇಲ್ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಏಕಲವ್ಯ ಪ್ರಶಸ್ತಿ, ಕ್ರೀಡಾರತ್ನ ಪ್ರಶಸ್ತಿ, ನಗದು ಪ್ರಶಸ್ತಿ ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿನ ಶ್ರಮ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಭಾರತದಲ್ಲಿ ಶೇ. 46ರಷ್ಟು ಯುವಜನರಿದ್ದಾರೆ. ಮುಂದಿನ 25ವರ್ಷಗಳು ಭಾರತದ ಭವಿಷ್ಯ ಈ ಯುವಜನರ ಮೇಲಿದೆ ಎಂದರು.
ಜಿಪಂ ಸಿಇಒ ಮಹಮ್ಮದ್ ರೋಷನ್ ಅವರು ಸ್ಪರ್ಧೆಗಳಿಗೆ ಜೋಡೆತ್ತಿನ ಬಂಡಿ ಓಡಿಸುವ ಮೂಲಕ ಚಾಲನೆ ನೀಡಿದರು. ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಗ್ರಾಪಂ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಶಿವಪ್ಪ ಅಡಿಯಾರ, ಜಿಪಂ ಉಪಕಾರ್ಯದರ್ಶಿ ಎಸ್.ಬಿ. ಮುಳಳ್ಳಿ, ಸವಣೂರ ಉಪವಿಭಾಗಾಧಿಕಾರಿ ರಾಯಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಉಪಸ್ಥಿತರಿದ್ದರು.