ಜಿಲ್ಲೆ

ಪಿಸ್ತೂಲ್ ತೋರಿಸಿ ಬೆದರಿಕೆ, ತನಿಖೆ ಶುರು - ಬ್ಯಾಂಕ್ ಅಧಿಕಾರಿಗಳಿಗೆ ದಿಗ್ಬಂಧನ ಪ್ರಕರಣ - ಸಂಪ್ಯ ಠಾಣೆಯಲ್ಲಿ ದೂರು

ಬ್ಯಾಂಕ್ ಸಾಲ ವಸೂಲಾತಿಗೆ ಮನೆಗೆ ಹೋದ ಅಧಿಕಾರಿಗಳನ್ನು ಕೂಡಿ ಹಾಕಿ, ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಕೇಸ್‌ನಲ್ಲಿ ಉದ್ಯಮಿಗಳಿಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಂಪ್ಯ ಠಾಣೆ ಪೊಲೀಸರು ಶುಕ್ರವಾರ ಬಲ್ನಾಡು ಮನೆಗೆ ತೆರಳಿ ತನಿಖೆ ಆರಂಭಿಸಿದ್ದಾರೆ.

ಬಲ್ನಾಡುವಿನಲ್ಲಿರುವ ಬಂಗಲೆಗೆ ಸಂಪ್ಯ ಠಾಣೆ ಉಪನಿರೀಕ್ಷಕ ಜಂಬೂರಾಜ್ ಬಿ. ಮಹಾಜನ್ ತಂಡ ಭೇಟಿ ನೀಡಿ ಬೆಳಗ್ಗಿನಿಂದಲೇ ತನಿಖೆ ಕೈಗೊಂಡು, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಮಧ್ಯಾಹ್ನ ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಆಗಮಿಸಿ ಮತ್ತಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.

ದ್ವಿಚಕ್ರವಾಹನ ಮಾರಾಟ ಮಳಿಗೆಯ ಮಾಲೀಕ ಅಖಿಲೇಶ್ ಹಾಗೂ ಕೃಷ್ಣ ಕಿಶೋರ್ ವಿವಿಧ ಉದ್ದಿಮೆಗಳ ಸ್ಥಾಪನೆ ಸಲುವಾಗಿ ಬ್ಯಾಂಕ್‌ನಿಂದ ೨ ಕೋಟಿ ರೂ. ಸಾಲ ಪಡೆದಿದ್ದರು. ಮರುಪಾವತಿಸುವಂತೆ ಅವರಿಗೆ ಹಲವು ಬಾರಿ ಲೀಗಲ್ ನೋಟಿಸ್ ನೀಡಿದರೂ, ತಿಳಿಸಿ ಹೇಳಿದರೂ, ಸಾಲ ಮರುಪಾವತಿ ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬಲ್ನಾಡಿನ ಉಜ್ರುಪಾದೆಯಲ್ಲಿರುವ ಮನೆಗೆ ಸಾಲ ವಸೂಲಾತಿಗಾಗಿ ಮೂವರು ಬ್ಯಾಂಕ್ ಸಿಬ್ಬಂದಿ ಗುರುವಾರ ತೆರಳಿದ್ದರು. ಇದರಿಂದ ಅಸಮಾಧಾನಗೊಂಡ ಅಖಿಲೇಶ್ ಮೂರು ಮಂದಿಯನ್ನೂ ಬಲವಂತವಾಗಿ ಮನೆಯೊಳಗೆ ಕೂಡಿಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಕೃಷ್ಣ ಕಿಶೋರ್ ಅಧಿಕಾರಿಗಳಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇನ್ನೊಂದೆಡೆ, ಪ್ರಕರಣವನ್ನು ಮುಚ್ಚಿ ಹಾಕಲು ಬ್ಯಾಂಕ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪೆಟ್ರೋಲ್ ಪಂಪ್ ಮಾಲೀಕರೊಬ್ಬರು ವಿವಿಧ ಮೂಲಗಳಿಂದ ಒತ್ತಡ ಹೇರುತ್ತಿದ್ದಾರೆ, ರಾಜಕೀಯ ಮುಖಂಡರಿಂದ ಕರೆ ಮಾಡಿಸಲಾಗಿದೆ ಎನ್ನಲಾಗಿದೆ. ಆರೋಪಿಗಳು ಪುತ್ತೂರು, ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ದ್ವಿಚಕ್ರವಾಹನ ಮಾರಾಟ ಮಳಿಗೆ ಹೊಂದಿದ್ದು, ಪುತ್ತೂರಿನಲ್ಲಿ ಪೆಟ್ರೋಲ್ ಪಂಪ್, ಮಂಗಳೂರಿನಲ್ಲಿ ಸೈಕಲ್ ಹಾಗೂ ದ್ವಿಚಕ್ರವಾಹನ ಮಾರಾಟ ಮಳಿಗೆಯನ್ನು ಹೊಂದಿದ್ದಾರೆ. ಉದ್ಯಮದ ವಿಸ್ತರಣೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು ಎನ್ನಲಾಗಿದೆ.

ಪ್ರತಿ ದೂರು!
ಮನೆಗೆ ಅಕ್ರಮ ಪ್ರವೇಶ ಮಾಡಿ ಪರಿಚಯವನ್ನು ಬಹಿರಂಗಪಡಿಸದೆ ನಿಮ್ಮ ಮನೆಯನ್ನು ಜಪ್ತಿ ಮಾಡುವುದಾಗಿ ಬ್ಯಾಂಕ್ ಸಿಬ್ಬಂದಿ ಚೈತನ್ಯ ಹಾಗೂ ಆಕಾಶ್ ಬೆದರಿಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆ. ಅವರಿಗೆ ದಿವ್ಯಶ್ರೀ ಎಂಬುವರು ಪ್ರೋತ್ಸಾಹ ನೀಡಿದ್ದಾಗಿ ಸಂತ್ರಸ್ತ ಮಹಿಳೆಯೊಬ್ಬರು ಸಂಪ್ಯ ಠಾಣೆಗೆ ಪ್ರತಿ ದೂರು ನೀಡಿದ್ದಾರೆ.

ಆರೋಪಿಗಳ ಪಲಾಯನ?
ಅಖಿಲೇಶ್ ಹಾಗೂ ಕೃಷ್ಣ ಕಿಶೋರ್ ಗುರುವಾರ ರಾತ್ರಿಯ ತನಕವೂ ಪುತ್ತೂರು ಪೇಟೆಯಲ್ಲಿ ಸುತ್ತಾಡುತ್ತಿದ್ದು, ಹಲವರಿಗೆ ಕರೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ಪ್ರಯತ್ನ -ಲಿಸದಿದ್ದಾಗ ಶುಕ್ರವಾರ ನಾಪತ್ತೆಯಾಗಿದ್ದಾರೆ. ಕೆಲವು ಮೂಲಗಳ ಪ್ರಕಾರ ಪೊಲೀಸರು ಮನೆಗೆ ತನಿಖೆಗೆಂದು ಶುಕ್ರವಾರ ಬಂದಾಗ ಹಿಂಬಾಗಿಲಿನಿಂದ ರಬ್ಬರ್ ಗುಡ್ಡಕ್ಕೆ ಓಡಿ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆ ಖಾಸಗಿ ಜಾಗ ಎಂಬ ನೆಪವೊಡ್ಡಿ ಮಾಧ್ಯಮ ಪ್ರತಿನಿಽಗಳು ಸ್ಥಳಕ್ಕೆ ಬಾರದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ. ತನಿಖೆಯಿಂದ ಸತ್ಯಾಸತ್ಯತೆ ಗೊತ್ತಾಗಲಿದೆ. ಆರೋಪಿಗಳು ಪರವಾನಗಿ ಪಡೆದ ಪಿಸ್ತೂಲನ್ನೇ ಹೊಂದಿದ್ದಾರೆ. ಆದರೂ ಅದನ್ನು ತೋರಿಸಿ ಜೀವ ಬೆದರಿಕೆ ಹಾಕುವುದು ತಪ್ಪು. ಅಪರಾಧಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
| ಯತೀಶ್ ಎನ್
ಪೊಲೀಸ್ ವರಿಷ್ಠಾಧಿಕಾರಿ, ದ.ಕ.