ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟದ ಹತ್ತಿರ ಇರುವ ಪಿರಮಿಡ್ ಧ್ಯಾನ ಮಂದಿರದಲ್ಲಿ ಬ್ರಹ್ಮಶ್ರೀ ಸುಭಾಸ್ ಪತ್ರೀಜಿ ಅವರ 76ನೇ ಜಯಂತಿ ಅಂಗವಾಗಿ ಶನಿವಾರ ಧ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಇವತ್ತಿನ ಕಲುಷಿತ ವಾತಾವರಣ ಹಾಗೂ ಒತ್ತಡದ ಬದುಕಿನಲ್ಲಿ ಮನಸ್ಸಿಗೆ ಶಾಂತಿ ಸಿಗಬೇಕಾದರೆ ಅಂತಃರಂಗ ಶುದ್ಧಿ ಆಗಬೇಕು. ಇದಕ್ಕೆ ಧ್ಯಾನದ ಅಗತ್ಯ ಇದೆ ಎಂದು ನುಡಿದರು.
ಧ್ಯಾನ ಕ್ಷೇತ್ರಕ್ಕೆ ಸುಭಾಸ್ ಪತ್ರೀಜಿಯವರ ಕೊಡುಗೆ ಅನನ್ಯವಾದದ್ದು. ಸಮಾಜಕ್ಕೆ ಧ್ಯಾನದ ಮುಖಾಂತರ ಸೇವೆ ಸಲ್ಲಿಸಿ ರತ್ನರಾಗಿ ಉಳಿದಿದ್ದಾರೆ. ಕರ್ನಾಟಕದಲ್ಲಿ ಪಿರಮಿಡ್ ಮುಖಾಂತರ ಧ್ಯಾನ ಮಾಡುವ ರೀತಿ ಮತ್ತು ನೀತಿಯನ್ನು ಕಲಿಸಿ ಕೊಟ್ಟವರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿರಮಿಡ್ ಧ್ಯಾನ ಮಂದಿರದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಸ್ವಾಗತಿಸಿದರು. ವಿಶಾಲಾಕ್ಷಿ ಆಕಳವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ನೀಲಕಂಠ ಆಕಳವಾಡಿ, ಬಸವರಾಜ ಹೊಸಮನಿ, ಈಶ್ವರ ವಂಗಿ ಮುಂತಾದವರು ಭಾಗವಹಿಸಿದ್ದರು.