ಜಿಲ್ಲೆ

ರಾಜ್ಯಾದ್ಯಂತ ಕೊಳವೆ ಅನಿಲ; 5 ವರ್ಷದಲ್ಲಿ ಎಲ್ಲ ನಗರದಲ್ಲೂ ಜಾರಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ಮುಂದಿನ ಐದು ವರ್ಷದಲ್ಲಿ ಕೊಳವೆ ಮೂಲಕ ಅನಿಲ ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನಗರ ಅನಿಲ ವಿತರಣಾ (ಸಿಜಿಡಿ) ನೀತಿ ತರಲು ಸರ್ಕಾರ ಮುಂದಾಗಿದೆ.

ನಗರ ಪ್ರದೇಶದಲ್ಲಿ ಕೊಳವೆ ಮೂಲಕವೇ ಅಡುಗೆ ಅನಿಲ ಸರಬರಾಜು ಮಾಡುವ ಯೋಜನೆಯ ಜಾರಿಗೆ 2015ರಿಂದ ಪ್ರಯತ್ನ ಆರಂಭವಾಗಿದೆ. ಆದರೆ, ನಿರೀಕ್ಷಿತ ವೇಗ ಪಡೆಯುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಅಡ್ಡಿ-ಆತಂಕಗಳೇ ಹೆಚ್ಚಾಗಿವೆ. ಯಾವುದೇ ನಿಯಂತ್ರಣ ಇಲ್ಲ. ಆದ್ದರಿಂದ ಯೋಜನೆಗೆ ವೇಗ ನೀಡಲು ಸರ್ಕಾರ ನೀತಿಯ ಮೂಲಕ ಕಾರ್ಯೋನ್ಮುಖವಾಗಲು ನಿರ್ಧರಿಸಿದೆ.

ಬೆಂಗಳೂರು ನಗರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿರುವುದು 3 ಲಕ್ಷ ಮನೆಗಳಿಗೆ ಮಾತ್ರ, ಅದರಲ್ಲಿ 80 ಸಾವಿರ ಮನೆಗಳಿಗೆ ಮಾತ್ರ ಕೊಳವೆಯಲ್ಲಿ ಅನಿಲ ಸರಬರಾಜು ಆಗುತ್ತಿದೆ. ಆಮೆಗತಿಯಲ್ಲಿ ಸಾಗಿದರೆ ಯೋಜನೆ ಪೂರ್ಣಗೊಳಿಸಲು ಇನ್ನೂ ಹತ್ತಾರು ವರ್ಷ ಕಾಯಬೇಕಾಗುತ್ತದೆ. ಆದ್ದರಿಂದ ಯೋಜನೆಗೆ ವೇಗ ನೀಡಬೇಕಾದ ಅನಿವಾರ್ಯತೆ ಇದೆ.

ಕೇಂದ್ರ ಸರ್ಕಾರ 2021ರಲ್ಲಿಯೇ ರಾಜ್ಯಕ್ಕೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದೆ. ಮೂಲಸೌಕರ್ಯ ಇಲಾಖೆ ಇದೀಗ ಆ ನಿಟ್ಟಿನಲ್ಲಿ ನೀತಿ ಸಿದ್ಧಪಡಿಸಿದೆ.

2 ವಾರದಲ್ಲಿ ಒಪ್ಪಿಗೆ ಸಾಧ್ಯತೆ: ನೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಸಭೆಗಳು ನಡೆದಿವೆ. ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪ್ರಾತ್ಯ ಕ್ಷಿಕೆಯ ಮೂಲಕ ವಿವರಿಸಲಾಗಿದೆ. ಒಂದೆರಡು ವಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿ ಒಪ್ಪಿಗೆ ಸಿಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಬೊಕ್ಕಸಕ್ಕೆ ಹೊರೆಯಾಗಲ್ಲ

ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಇರುವುದಿಲ್ಲ. ಬದಲಾಗಿ ಯೋಜನೆ ಜಾರಿ ಮಾಡುವ ಸಂಸ್ಥೆಗಳೇ ಕೊಳವೆ ಅಳವಡಿಸುವ ಮಾರ್ಗಕ್ಕೆ ಒಂದು ಕಿಮೀಗೆ ಒಂದು ಸಾವಿರ ರೂ.ಗಳಂತೆ ಶುಲ್ಕವನ್ನು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕಾಗುತ್ತದೆ.

ಗ್ರಾಹಕರಿಗೆ ಹಗುರ

ಒಂದು ಮನೆಯ ಸಂಪರ್ಕಕ್ಕೆ 4 ಸಾವಿರ ರೂ.ಗಳು ಹಾಗೂ 500 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಅನಿಲ ಸಿಲಿಂಡರ್ ಪಡೆಯುವುದಕ್ಕಿಂತ ಶೇ.30 ರಷ್ಟು ದರ ಕಡಿಮೆ ಯಾಗುತ್ತದೆ ಎಂದೇ ಅಂದಾಜು ಮಾಡಲಾಗಿದೆ. ಇದು ಹಸಿರು ಇಂಧನ ನೀಡುವುದು ಮಾತ್ರವಲ್ಲದೇ ಗ್ರಾಹಕರ ಜೇಬಿಗೂ ಹಗುರ ವಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ನೀತಿಯಲ್ಲಿ ಏನು ಇರಲಿದೆ?

?ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ಶುಲ್ಕ, ಸಮಯ ನಿಗದಿ ?ಅನಿಲ ಪೈಪ್​ಲೈನ್ ಜಾಲದ ಸುರಕ್ಷತೆ ?ಯೋಜನೆಗೆ ಅಗತ್ಯ ಭೂಮಿ ಒದಗಿಸುವುದು ?ನಗರಗಳ ಮಾಸ್ಟರ್ ಪ್ಲಾ್ಯನ್​ಗಳಲ್ಲಿಯೂ ಭೂಮಿ ಮೀಸಲಿಡುವುದು ?ನಗರ ಮೂಲಸೌಕರ್ಯ ಯೋಜನೆಗಳಲ್ಲಿ ಗ್ಯಾಸ್ ಪೈಪ್​ಲೈನ್ ಸೇರಿಸುವುದು ?ಕಟ್ಟಡಗಳಿಗೆ ಕಟ್ಟಡ ಯೋಜನೆಯ ಅನುಮೋದನೆ ವೇಳೆಯೇ ನಿಬಂಧನೆ ಸೇರಿಸುವುದು ?ಸರಕು ಸಾಗಣೆ ವಾಹನಗಳಿಗೆ ಆದ್ಯತೆಯ ಮೇರೆಗೆ ಸಿಎನ್​ಜಿ/ಎಲ್​ಎನ್​ಜಿ ಅಳವಡಿಕೆ ?ಟೆಲಿಕಾಂ ಸೇವಾ ಟವರ್, ಅಪಾರ್ಟ್​ವೆುಂಟ್, ವಾಣಿಜ್ಯ ಕಟ್ಟಡ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಡೀಸೆಲ್ ಜನರೇಟರ್​ಗಳು ಸಿಎನ್​ಜಿಗೆ ಪರಿವರ್ತನೆ ?ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯಕಾರಕ ಇಂಧನಗಳ ನಿಷೇಧ ?ರಾಜ್ಯದಲ್ಲಿ ಸಿಎನ್​ಜಿ ವಾಹನಗಳ ಮೇಲಿನ ತೆರಿಗೆ ಕಡಿತ ?ಮಾರ್ಕೆಟಿಂಗ್ ಮತ್ತು ಜಾಗೃತಿ ಅಭಿಯಾನ.

ಅನಿಲ ಆಧಾರಿತ ಆರ್ಥಿಕತೆ ಅಭಿವೃದ್ಧಿ

ಕೊಳವೆಯ ಮೂಲಕ ಅನಿಲವನ್ನು ಕೇವಲ ಮನೆಗಳಿಗೆ ಮಾತ್ರ ಸರಬರಾಜು ಮಾಡುತ್ತಿಲ್ಲ. ವಾಹನಗಳು, ಉದ್ದಿಮೆ ಗಳು, ಕೈಗಾರಿಕೆಗಳು ಹೀಗೆ ಅಗತ್ಯವಿರುವ ಎಲ್ಲೆಡೆಗೆ ಸ್ವಚ್ಛ ಹಾಗೂ ಗುಣಮಟ್ಟದ ಇಂಧನ ಸರಬರಾಜು ಮಾಡುವ ಮೂಲಕ ಅನಿಲ ಆಧಾರಿತ ಆರ್ಥಿಕತೆ ಬೆಳೆಸಲು ಸರ್ಕಾರ ಉತ್ಸುಕವಾಗಿದೆ. ನೀತಿಯಲ್ಲಿಯೂ ಅದೇ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಮಾಲಿನ್ಯಕಾರಕ ಇಂಧನಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂಬುದು ಸರ್ಕಾರದ ಒಟ್ಟಾರೆ ಉದ್ದೇಶವಾಗಿದೆ.

ಉದ್ದೇಶಗಳೇನು?

?ಹಸಿರು ಮತ್ತು ಶುದ್ಧ ಇಂಧನವಾಗಿ ನೈಸರ್ಗಿಕ ಅನಿಲಕ್ಕೆ ಉತ್ತೇಜನ ?ಸಿಜಿಡಿ ಮೂಲಸೌಕರ್ಯದ ಅನುಷ್ಠಾನಕ್ಕೆ ವೇಗ ?ತಡೆರಹಿತ ಪೂರೈಕೆಗೆ ಕ್ರಮ?ಸಮಯ ಮಿತಿಯಲ್ಲಿ ಅನುಮತಿಗಳು/ ಶುಲ್ಕಗಳು, ಪ್ರಮಾಣಿತ ಮತ್ತು ಏಕರೂಪ ?ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ?ಸ್ವಚ್ಛ ಭಾರತ್ ಅಭಿಯಾನಕ್ಕೆ ಪೂರಕ ?ಎಲ್ಲ ಜಿಲ್ಲೆಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನಗರಗಳಲ್ಲಿ ಕೊಳವೆ ಮಾರ್ಗದ ಮೂಲಕ ಅನಿಲ ಪೂರೈಕೆ ಮಾಡಬೇಕು. ಅದಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಲು ಅಡ್ಡಿಗಳು ಇರಬಾರದು ಎಂಬ ಕಾರಣಕ್ಕೆ ಹೊಸ ನೀತಿ ತರಲು ಸಿದ್ಧತೆ ನಡೆಸಲಾಗಿದೆ. ಆದಷ್ಟು ಬೇಗ ನೀತಿಯನ್ನು ಜಾರಿಗೊಳಿಸಲಾಗುತ್ತದೆ : ಎಂ.ಬಿ. ಪಾಟೀಲ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವರು.