ಚಿಕ್ಕಮಗಳೂರು: ಅಮೃತ್ ಯೋಜನೆಯಲ್ಲಿ ಅಳವಡಿಸಿರುವ ಪೈಪ್ಲೈನ್ ಕಾಮಗಾರಿ ಅಪೂರ್ಣವಾಗಿದ್ದು ಕೆಲವೆಡೆ ಸೋರಿಕೆಯಾಗುತ್ತಿರುವ ನೀರಿನಲ್ಲಿ ಮಕ್ಕಳು ಸ್ನಾನ ಮಾಡುತ್ತಿದ್ದರೆ ಮತ್ತೊಂದೆಡೆ ಕೋಟೆ ಪಾರ್ಕ್ ಬಳಿ ಓವರ್ ಹೆಡ್ ಟ್ಯಾಂಕ್ಗೆ ಪೂರೈಕೆ ಮಾಡುವಾಗ ಚಿಲುಮೆಯಂತೆ ನೀರು ಉಕ್ಕಿ ವ್ಯರ್ಥವಾಗುತ್ತಿದೆ.
ನಗರಸಭೆಯಿಂದ ನಗರದಲ್ಲಿ 24*7 ಕುಡಿಯುವ ನೀರು ಪೂರೈಕೆ ಮಾಡಲು ಅಮೃತ್ ಯೋಜನೆ ಮೂಲಕ ಮನೆಗಳಿಗೆ ಪೈಪ್ಲೈನ್ ಅಳವಡಿಸಲಾಗಿದೆ. ಆದರೆ ಬಹುತೇಕ ಮನೆಗಳಿಗೆ ಪೈಪ್ಲೈನ್ ಅಳವಡಿಕೆಯಾಗಿದೆಯಾದರೂ ಮೀಟರ್ ಅಳವಡಿಸಿಲ್ಲ. ಈಗಾಗಲೆ ವಾರಕ್ಕೆ ಎರಡ್ಮೂರು ಬಾರಿ ಪ್ರಾಯೋಗಿಕವಾಗಿ ನೀರು ಪೂರೈಸಲಾಗುತ್ತಿದ್ದು ನಗರದ ಕೆಂಪನಹಳ್ಳಿ ಶ್ರೀ ಪತಂಜಲಿ ರಸ್ತೆ ಸೇರಿದಂತೆ ಹಲವೆಡೆ ನೀರು ಸೋರಿಕೆಯಾಗುತ್ತಿದೆ. ನೀರು ಬಿಡುವುದನ್ನೇ ಮಕ್ಕಳು ಕಾದು ಕುಳಿತು ಅಲ್ಲೇ ಸ್ನಾನ ಮಾಡುತ್ತಿದ್ದರೆ ಕೆಲವರು ನಗರಸಭೆಗೆ ಹಿಡಿಶಾಪ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ನಗರಸಭೆ ಸಿಬ್ಬಂದಿ ನೀರು ಪೋಲಾಗುವುದನ್ನು ತಪ್ಪಿಸಬೇಕಿದೆ.
ಕೋಟೆ ಬಡಾವಣೆ ಪಾರ್ಕ್ನೊಳಗಿರುವ ಓವರ್ಹೆಡ್ ಟ್ಯಾಂಕ್ಗೆ ವಾರಕ್ಕೆ ಮೂರು ಬಾರಿ ನೀರು ತುಂಬಿಸುವ ಸಂದರ್ಭ ಪ್ರತಿ ಬಾರಿ ಟ್ಯಾಂಕ್ ತುಂಬಿ ನೀರು ಉಕ್ಕಿದರೂ ನಗರಸಭೆ ಸಿಬ್ಬಂದಿ ಗಮನ ಹರಿಸದೆ ನೀರು ವ್ಯರ್ಥವಾಗುತ್ತಿದೆ. ಟ್ಯಾಂಕ್ ತುಂಬಿದ ಕೂಡಲೆ ಕೆಳಗಿನ ಪೈಪ್ನಲ್ಲಿ ಚಿಲುಮೆಯಂತೆ ನೀರು ಉಕ್ಕಿ ಪಾರ್ಕ್ನಲ್ಲಿ ಹರಿಯುತ್ತಿದ್ದು ಕಳೆದ ಆರು ತಿಂಗಳಿಂದ ಇದೇ ರೀತಿಯಾಗುತ್ತಿದೆ. ಒಂದೆರಡು ಭಾಗದಲ್ಲಿ ನೀರು ಸಂಗ್ರಹವಾಗಿ ಪಾರ್ಕ್ನ ಕಾಂಪೌಂಡ್ ಕೆಳಭಾಗ ಜರಿದು ಕುಸಿಯುವ ಹಂತ ತಲುಪಿದೆ. ನಗರಸಭೆ ಅಧಿಕಾರಿ ಸಿಬ್ಬಂದಿಗೆ ಈ ವಿಷಯ ತಿಳಿದಿದ್ದರೂ ನಿರ್ಲಕ್ಷ್ಯಹಿಸುತ್ತಿದ್ದಾರೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಓವರ್ ಟ್ಯಾಂಕ್ ತುಂಬಿ ಅನಾಹುತವಾದರೆ ಎಂಬ ಭೀತಿಯೂ ಇದೆ. ಸುತ್ತಮುತ್ತಲಿನ ಜನ ನಿತ್ಯ ಪಾರ್ಕ್ನಲ್ಲಿ ವಾಕ್ ಮಾಡುತ್ತಿದ್ದು ವಾಕ್ಪಾತ್ನಲ್ಲಿ ನೀರು ನಿಲ್ಲುವ ಕಾರಣ ವಾಯುವಿಹಾರಿಗಳಿಗೆ ತೊಂದರೆಯಾಗುವ ಜತೆಗೆ ಸೊಳ್ಳೆ ಕಾಟದಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ನಗರಸಭೆ ಸಿಬ್ಬಂದಿ ಈ ಎಲ್ಲ ಸಕಡೆ ನೀರು ಪೋಲಾಗುವುದನ್ನು ತಪ್ಪಿಸಬೇಕು.