ಜಿಲ್ಲೆ

ಬಿ.ಸಿ.ರೋಡ್‌ ಪಿಂಕ್ ಟಾಯ್ಲೆಟ್ ಕಾಮಗಾರಿ ಕೊನೆಗೂ ಪೂರ್ಣ

Mangaluru - Desk - Rajesh Shetty

ಸಂದೀಪ್ ಸಾಲ್ಯಾನ್ ಬಂಟ್ವಾಳ

ವಿರೋಧ, ಆಕ್ಷೇಪಗಳ ನಡುವೆ ಬಂಟ್ವಾಳ ಪುರಸಭೆ ವತಿಯಿಂದ ಬಿ.ಸಿ.ರೋಡ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಪಿಂಕ್ ಟಾಯ್ಲೆಟ್ ಕಾಮಗಾರಿ ಪೂರ್ಣಗೊಂಡಿದೆ. ತಾಲೂಕು ಆಡಳಿತಸೌಧದ ಮುಂಭಾಗ ಕೇಂದ್ರ ಸರ್ಕಾರದ ಅಮೃತ ನಿರ್ಮಲ ನಗರ ಯೋಜನೆಯಡಿ ಮಹಿಳೆಯರಿಗಾಗಿ ಸುಸಜ್ಜಿತವಾದ ಪಿಂಕ್ ಶೌಚಗೃಹ ಎದ್ದುನಿಂತಿದೆ.

ಸ್ವಾತಂತ್ರೃ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದ 75 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಸ್ವಚ್ಛ, ಸುಂದರವಾಗಿಸಲು ಅಮೃತ ನಿರ್ಮಲ ನಗರ ಯೋಜನೆಯಡಿ ಬಂಟ್ವಾಳ ಪುರಸಭೆ ಆಯ್ಕೆಯಾಗಿದ್ದು 1 ಕೋಟಿ ರೂ. ಅನುದಾನ ಪಡೆದುಕೊಂಡಿತ್ತು. ಬಂಟ್ವಾಳ ಪುರಸಭೆ ಈ ಅನುದಾನದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಾಣ, ಸಕ್ಕಿಂಗ್ ಯಂತ್ರ, ಹಿಟಾಚಿ, ಲಾರಿ ಖರೀದಿಗೆ ಯೋಜನೆ ರೂಪಿಸಿತ್ತು. ಈ ಪೈಕಿ 25.50 ಲಕ್ಷ ರೂ. ವೆಚ್ಚದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಿಸಲು ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಲಾಗಿತ್ತು. ಅರ್ಧ ಕಾಮಗಾರಿ ಮುಗಿದು ಲಿಂಟಲ್ ಹಂತಕ್ಕೆ ಬರುವ ವೇಳೆಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಾತ್ಕಾಲಿಕ ತಡೆ ನೀಡಿದ್ದರು.

ಸಾರ್ವಜನಿಕ ಆಕ್ಷೇಪ: ಪುರಸಭೆ ಕೌನ್ಸಿಲ್ ಸಭೆಯಲ್ಲಾದ ತೀರ್ಮಾನದಂತೆ ಪಿಂಕ್ ಟಾಯ್ಲೆಟ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಬಂಟ್ವಾಳ ಆಡಳಿತ ಸೌಧ ಸೇರಿದಂತೆ ಸುತ್ತಮುತ್ತ ಸರ್ಕಾರಿ ಕಚೇರಿಗಳಿದ್ದು, ಅಲ್ಲಿಗೆ ಬರುವ ಮಹಿಳೆಯರ ಅನುಕೂಲಕ್ಕಾಗಿ ಹಾಗೂ ಅಲ್ಲಿ ವಿವಿಧ ಇಲಾಖೆ, ಕಚೇರಿಗಳಲ್ಲಿ ಮಹಿಳೆಯರೇ ಹೆಚ್ಚಿರುವ ಕಾರಣ ತಾಲೂಕು ಆಡಳಿತ ಸೌಧದ ಮುಂಭಾಗ ಪುರಸಭೆ ಸ್ಥಳ ಹೆಚ್ಚು ಸೂಕ್ತ ಎಂದು ಆಯ್ಕೆಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆ ಜಾಗದಲ್ಲಿ ಹಿಂದೆ ಸಾರ್ವಜನಿಕ ರಂಗಮಂದಿರವೊಂದಿದ್ದು ಕೆಡವಲಾಗಿತ್ತು. ಮತ್ತೆ ಅದನ್ನು ನಿರ್ಮಿಸಬೇಕು, ತಾಲೂಕು ಆಡಳಿತ ಸೌಧ ಮುಂಭಾಗ ಟಾಯ್ಲೆಟ್ ನಿರ್ಮಿಸಲು ಸೂಕ್ತವಲ್ಲ ಎಂದು ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ಲಿಖಿತ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸುವಂತೆ ಅಂದಿನ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದಲ್ಲದೆ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿತ್ತು.

ವಾಮಚಾರವೂ ನಡೆದಿತ್ತು: ಜಿಲ್ಲಾಧಿಕಾರಿ ನೀಡಿದ್ದ ತಾತ್ಕಾಲಿಕ ತಡೆ ತೆರವಾದ ಬಳಿಕ ಪಿಂಕ್ ಟಾಯ್ಲೆಟ್ ಕಾಮಗಾರಿ ಚುರುಕು ಪಡೆದುಕೊಂಡಿತ್ತು. ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ಕಾಮಗಾರಿಗೆ ಅಡ್ಡಿಪಡಿಸುವ ಉದ್ದೇಶದಿಂದ ಕಳೆದ ನ.16ರಂದು ಟಾಯ್ಲೆಟ್ ದ್ವಾರದ ಬಳಿ ವಾಮಚಾರ ಮಾಡಿದ್ದು ಕುರುಹು ಪತ್ತೆಯಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ಪುರಸಭೆ ಇದನ್ನು ಲೆಕ್ಕಕ್ಕೆ ಪರಿಗಣಿಸದೆ ಶೀಘ್ರ ಕಾಮಗಾರಿಗೆ ಆದ್ಯತೆ ನೀಡಿದ ಬಳಿಕ ಅಡೆತಡೆಯಿಲ್ಲದೆ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.

ಬರೀ ಶೌಚಗೃಹ ಮಾತ್ರವಲ್ಲ

ಮಹಿಳೆಯರು ಶೌಚಗೃಹವನ್ನು ಸುಲಭವಾಗಿ ಗುರುತಿಸಲು ಪಿಂಕ್ ಬಣ್ಣ ಬಳಿಯಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಮಾತ್ರವಲ್ಲದೆ ಮಗುವಿಗೆ ಹಾಲುಣಿಸುವ ಕೊಠಡಿ ಇರಲಿದೆ. ಜತೆಗೆ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್‌ಕಿನ್ ವ್ಯವಸ್ಥೆಯನ್ನೊಳಗೊಂಡಿರುತ್ತದೆ.

ಅಮೃತ ನಿರ್ಮಲ ನಗರ ಯೋಜನೆಯಡಿ ನಿರ್ಮಾಣಗೊಂಡಿರುವ ಪಿಂಕ್ ಟಾಯ್ಲೆಟ್‌ನ ಕಾಮಗಾರಿ ಪೂರ್ಣಗೊಂಡಿದೆ. ಇದು ಬರಿ ಶೌಚಗೃಹ ಮಾತ್ರವಲ್ಲದೆ ಮಹಿಳೆಯರ ಅನುಕೂಲಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡಿದೆ. ಬಿ.ಸಿ.ರೋಡ್‌ಗೆ ವಿವಿಧ ಕೆಲಸಗಳಿಗೆ ಬರುವ ಮಹಿಳೆಯರಿಗೆ ಉಪಯೋಗವಾಗಲಿದೆ.- ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ ಬಂಟ್ವಾಳ