ಮನು ಬಳಂಜ, ಬೆಳ್ತಂಗಡಿ
ರೈತರೊಬ್ಬರು ಬೆಳ್ತಂಗಡಿ ತಾಲೂಕಿನಾದ್ಯಂತ 100 ಎಕರೆ ಪ್ರದೇಶದಲ್ಲಿ ಬೆಳೆದ ಅನಾನಸು ಬೆಳೆ ಮಾರುಕಟ್ಟೆ ಸಿಗದೆ ಸುಮಾರು 1.50 ಕೋಟಿ ರೂ. ನಷ್ಟದ ಹಾದಿಯಲ್ಲಿದ್ದಾರೆ.
ಕೇರಳ ಎರ್ನಾಕುಲಂ ಮೂಲದ ಶೈಜು ಎನ್.ಪಿ. ಅಂಬು 9 ವರ್ಷದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನಾನಸು ಬೆಳೆಯುತ್ತಿದ್ದಾರೆ. ಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಮಾಡಿ ಉತ್ತಮ ಬೆಳೆ ಪಡೆದು ಸುಮಾರು 300 ಟನ್ ಕಟಾವಿಗೆ ಸಿದ್ಧವಾಗಿದೆ. ಲಾಕ್‌ಡೌನ್‌ನಿಂದ ಯಾರೊಬ್ಬರೂ ಖರೀದಿಗೆ ಮುಂದಾಗದ ಕಾರಣ ಶೈಜು ಕಂಗಾಲಾಗಿದ್ದಾರೆ. ಎಕರೆಗೆ ಕನಿಷ್ಟ 2.50 ಲಕ್ಷ ರೂ. ವೆಚ್ಚವಾಗುತ್ತದೆ. ಮೊದಲ ಬೆಳೆಯಲ್ಲಿ ಲಾಭವಿಲ್ಲ. ಎರಡನೇ ಬೆಳೆಯ ಬಳಿಕವಷ್ಟೆ ಲಾಭ. ಈ ನಡುವೆ ಕಾರ್ಮಿಕರ ಸಮಸ್ಯೆ, ಹಂದಿ, ಮಂಗಗಳ ಕಾಟ ಎದುರಿಸಿ ಬೆಳೆ ಉಳಿಸಿಕೊಳ್ಳಬೇಕು.
ಜೈಪುರದಿಂದ ಬೇಡಿಕೆ ಬಂದಿದ್ದು, ಮೊದಲ 15 ಟನ್ ಕಳುಹಿಸಲಾಗಿದೆ. ಉಳಿದ ಬೆಳೆ ಭೂಮಿಯಲ್ಲಿ ಉಳಿದುಕೊಂಡಿದೆ. ಸರ್ಕಾರ ಈ ಕುರಿತು ಗಮನ ಹರಿಸಿ, ನೆರವು ಒದಗಿಸಬೇಕು ಎಂಬುದು ಅವರ ಮನವಿ.
ಮಾರುಕಟ್ಟೆ ಬಂದ್
ಮೋರಿಸ್, ರಾಜ, ರಾಣಿ ತಳಿಯ ಅನಾನಸಿಗೆ ಹೆಚ್ಚಿನ ಬೇಡಿಕೆಯಿದ್ದು, ಶೈಜು ಬೆಳೆಯುವ ಮೋರಿಸ್ ತಳಿಗೆ ದೆಹಲಿ, ಮುಂಬೈ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಪುಣೆ, ಇಂದೋರ್, ರಾಜಸ್ಥಾನ, ಪಾಕಿಸ್ತಾನ ಗಡಿವರೆಗೂ ಇಲ್ಲಿಂದ ಅನಾನಸು ರವಾನೆಯಾಗುತ್ತಿತ್ತು. ಸದ್ಯ ಯಾವ ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲ. ಸೀಸನ್‌ನಲ್ಲಿ ಕೆ.ಜಿ.ಗೆ 40ರಿಂದ 45 ರೂ.ಗೆ ಮಾರಾಟವಾಗುತ್ತಿದ್ದು, ಪ್ರಸಕ್ತ 15ರಿಂದ 17 ರೂ. ಗೆ ಬೇಡಿಕೆ ಬರುತ್ತಿದೆ. ಕನಿಷ್ಠ ಪಕ್ಷ 30 ರೂ. ಸಿಕ್ಕಿದರಷ್ಟೇ ಅಸಲು ಸಿಗಬಹುದು ಎನ್ನುತ್ತಾರೆ ಶೈಜು.