ಚಿಕ್ಕಬಳ್ಳಾಪುರ: ಮುಂಗಾರು ಪ್ರಾರಂಭವಾದರೆ ಸಾಕು, ಗೌರಿಬಿದನೂರು ನಗರಕ್ಕೆ ಹೊಂದಿಕೊಂಡಿರುವ ನದಿ ದಡದ ವಾಸಿಗಳ ಎದೆಯಲ್ಲಿ ಢವ ಢವ ಭಯ ಶುರುವಾಗುತ್ತದೆ. ಯಾವಾಗ ಮಳೆ ಜೋರಾಗಿ ಉತ್ತರ ಪಿನಾಕಿನಿ ಉಕ್ಕಿ ಹರಿಯುತ್ತಾಳೋ? ಮನೆಗಳಿಗೆ ನೀರು ನುಗ್ಗಿ ಏನು ಅನಾಹುತ ಸಂಭವಿಸುತ್ತದೆಯೋ ಎಂದು ಇಲ್ಲಿನ ಜನರು ಜೀವಭಯದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಾರೆ.
ಗೌರಿಬಿದನೂರು ನಗರದ ಸಂತೆ ಮೈದಾನದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಹಿಂಬದಿ ನದಿ ದಡದ ಪಾತ್ರದಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿಕೊಂಡು ಹಲವರು ಜೀವನ ನಡೆಸುತ್ತಿದ್ದಾರೆ. ಇವರಿಗೆ ಪರ್ಯಾಯ ಸೌಲಭ್ಯ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆಯಾದರೂ ಇನ್ನೂ ಸಫಲವಾಗಿಲ್ಲ. ಪ್ರತಿ ವರ್ಷ ಸ್ಥಳೀಯ ವಾಸಿಗಳಿಗೆ ಸಂಕಷ್ಟ ತಪ್ಪುತ್ತಿಲ್ಲ.
ನದಿ ಉಕ್ಕಿದರೆ ಮನೆಗಳಿಗೆ ನೀರು
ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದರೆ ಮನೆಗಳಿಗೆ ನಾಲ್ಕು ಅಡಿಯವರೆಗೂ ನೀರು ನುಗ್ಗುತ್ತದೆ. ಇದರೊಂದಿಗೆ ಹಾವು, ಚೇಳುಗಳಲ್ಲಿ ಮನೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ದಿನಸಿ ಸೇರಿದಂತೆ ಎಲ್ಲ ವಸ್ತುಗಳು ನೀರಿನಲ್ಲಿ ತೋಯ್ದು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ರಾತ್ರಿಯೆಲ್ಲಾ ಜಾಗರಣೆ ಮಾಡಬೇಕು.
ನದಿ ದಡದಲ್ಲಿ ವಾಸಿಸುತ್ತಿರುವವರೆಲ್ಲರೂ ಬಹುತೇಕ ನಿರ್ಗತಿಕರು. ಮನೆ ಕಟ್ಟಿಕೊಳ್ಳಲು ಅಂಗೈ ಅಗಲ ಜಾಗವಿಲ್ಲದ, ಸ್ವತಂ ಸೂರಿಲ್ಲದ ಬಡವರು. ನದಿದಡದಲ್ಲಿ ದಶಕಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ನಗರಸಭೆ ಮಾನವೀಯ ದೃಷ್ಟಿಯಿಂದ ರಸ್ತೆ, ಚರಂಡಿ, ವಿದ್ಯುತ್, ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಆದರೆ, ನದಿ ರಭಸದಿಂದ ಉಕ್ಕಿ ಹರಿದಾಗ ನದಿದಡದ ವಾಸಿಗಳು ನಿರಾಶ್ರಿತರಾಗಬೇಕಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಸ್ಥಳೀಯರದ್ದಾಗಿದೆ.
*ಉತ್ತರ ಪಿನಾಕಿನಿ ನದಿದಡದ ವಾಸಿಗಳಿಗೆ ಶಾಶ್ವತವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಜರುಗಿಸಲು ಹಾಗೂ ಸಂತ್ರಸ್ತ ಫಲಾನುಭವಿಗಳ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೆ.ಎಚ್.ಪುಟ್ಟಸ್ವಾಮಿ ಗೌಡ, ಶಾಸಕ
* ಮಳೆಗಾಲದಲ್ಲಿ ನದಿದಡದ ವಾಸಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗಳೊಂದಿಗೆ ಸೇರಿ ಜೆಸಿಬಿ ಯಂತ್ರಗಳ ಮೂಲಕ ಭೂಮಿ ಸಮತಟ್ಟುಗೊಳಿಸುವ ಹಾಗೂ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕೆಲಸವಾಗುತ್ತಿದೆ.
ಮಹೇಶ್ ಎಸ್.ಪತ್ರಿ, ತಹಶೀಲ್ದಾರ್, ಗೌರಿಬಿದನೂರು