ಜಿಲ್ಲೆ

ಇನ್ನು ಹುಬ್ಬಳ್ಳಿಯಲ್ಲೇ ಪೈಲಟ್ ತರಬೇತಿ, ಏರ್ ಟ್ಯಾಕ್ಸಿ ಅಕಾಡೆಮಿಯಿಂದ ಟ್ರೇನಿಂಗ್

Dharwada - Basavaraj Idli

ಹುಬ್ಬಳ್ಳಿ: ವಿಮಾನಯಾನದಲ್ಲಿ ಉದ್ಯೋಗ ಕಂಡುಕೊಳ್ಳಬೇಕೆಂಬ ಉತ್ತರ ಕರ್ನಾಟಕ ಭಾಗದ ಆಕಾಂಗಳಿಗೆ ಹೊಸದೊಂದು ಅವಕಾಶದ ಬಾಗಿಲು ತೆರೆದುಕೊಂಡಿದೆ. ಪೈಲಟ್ ಆಗುವ ಕನಸು ಹೊಂದಿದ ಅನೇಕರಿಗೆ ತಮ್ಮ ಊರಿನಲ್ಲಿಯೇ ತರಬೇತಿ ಪಡೆಯುವ ಅವಕಾಶ ಇನ್ನು ಒದಗಿ ಬರಲಿದೆ.

ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಏರ್ ಟ್ಯಾಕ್ಸಿ ಅಕಾಡೆಮಿ ಎಂಬ ಹರಿಯಾಣ ಮೂಲದ ಸಂಸ್ಥೆಯು ಫ್ಲೈಯಿಂಗ್ ಟ್ರೇನಿಂಗ್ ಆರ್ಗನೈಜೇಶನ್ (ಎಫ್ ಟಿಒ) ಆರಂಭಿಸಲು ಮುಂದಾಗಿದೆ. ಅಂದರೆ ಪೈಲಟ್, ಸಣ್ಣ ಏರ್ ಕ್ರಾಫ್ಟ್ ಗಳನ್ನು ಚಲಾಯಿಸುವವರಿಗೆ ತರಬೇತಿ ನೀಡುವ ಸಂಸ್ಥೆ ಇದಾಗಿದೆ.

ಬೆಂಗಳೂರಲ್ಲಿ ಮಾತ್ರ ಇದ್ದ ವಿಮಾನಯಾನ ತರಬೇತಿ ಇದೀಗ ದ್ವೀತಿಯ ಸ್ತರದ ನಗರವಾದ ಹುಬ್ಬಳ್ಳಿಗೂ ಬರುತ್ತಿದೆ. ಇದರಿಂದ ಹುಬ್ಬಳ್ಳಿ ಧಾರವಾಡ ಮಾತ್ರವಲ್ಲ, ಉತ್ತರ ಕರ್ನಾಟಕದ ನೂರಾರು ಪ್ರತಿಭಾವಂತರಿಗೆ ಇದರಿಂದ ಅನುಕೂಲವಾಗಲಿದೆ. ಹೊಸ ಉದ್ಯೋಗಗಳ ಸೃಷ್ಟಿಗೆ ಮುನ್ನುಡಿ ಬರೆಯಲಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣವು ರನ್ ವೇ ವಿಸ್ತರಣೆ, ಕಾರ್ಗೊ ಟರ್ಮಿನಲ್, ಹೊಸ ಟರ್ಮಿನಲ್ ಗಳ ಸ್ಥಾಪನೆ ಜತೆಗೆ ಹತ್ತಾರು ನಗರಗಳಿಗೆ ನಿತ್ಯ ವಿಮಾನ ಸೇವೆ ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸೇವೆ ನೀಡುತ್ತಿದೆ. ಇದೀಗ ಪೈಲಟ್ ತರಬೇತಿಗೂ ಅಣಿಯಾಗುತ್ತಿರುವುದು ಈ ಭಾಗದ ಜನರಲ್ಲಿ ಹೊಸ ಆಸೆ ಮೂಡಿಸಿದೆ.

ಏನಿದು ಏರ್ ಟ್ಯಾಕ್ಸಿ?:
ಇದೊಂದು ವಿಶಿಷ್ಟವಾದ ವೃತ್ತಿಪರ ವಿಮಾನಯಾನ ಕಂಪನಿಯಾಗಿದ್ದು, ಉತ್ತಮ ಗುಣಮಟ್ಟದ ಅದರಲ್ಲೂ ವಿಶೇಷವಾಗಿ ಕಡಿಮೆ- ದೂರ ಸಂಚರಿಸುವ ವಿಮಾನಯಾನ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಯಾಗಿದೆ.

ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ಜೆಟ್ ವಿಮಾನಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ನೆರವಾಗುತ್ತಿದೆ. ವಿಶ್ವಾಸಾರ್ಹತೆ, ಸುರಕ್ಷತೆಯೊಂದಿಗೆ ಕೈಗೆಟುಕುವ ದರದಲ್ಲಿ ಐಷಾರಾಮಿ ವಿಮಾನಯಾನ ಸೇವೆ ನೀಡುತ್ತಿದೆ.

ಕಂಪನಿಯು ಅತ್ಯಾಧುನಿಕ ವಿಮಾನಗಳ ಮೂಲಕ ಖಾಸಗಿ ವಿಮಾನ ಸೇವೆಯನ್ನೂ ಅಗತ್ಯ ಉಳ್ಳವರಿಗೆ ಒದಗಿಸುತ್ತಿದೆ. ಉಡಾನ್ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಏರ್ ಟ್ಯಾಕ್ಸಿ ಭಾರತದಾದ್ಯಂತ 32 ಮಾರ್ಗಗಳಲ್ಲಿ ವಿಮಾನಗಳ ಹಾರಾಟ ನಡೆಸುತ್ತಿದೆ.

ಅತ್ಯಾಧುನಿಕ ಹಾಗೂ ವೈವಿಧ್ಯಮಯವಾದ ಟೆಕ್ನಾಮ್ ಪಿ2010 ಹಾಗೂ ಪಿ2006ಟಿ ಸೇರಿ ಹಲವು ವಿಮಾನಗಳನ್ನು ಅಕಾಡೆಮಿ ಹೊಂದಿದೆ. ಅಕಾಡೆಮಿ ಬಳಿ ಇರುವ ಹೈ ವಿಂಗ್, ೋರ್ ಸೀಟರ್ನ ವಿಮಾನಗಳು ವೈಯಕ್ತಿಕ ಹಾಗೂ ಬಿಜನೆಸ್ ಟ್ರಾವೆಲ್ಗೆ ಅತ್ಯುತ್ತಮವಾಗಿವೆ.

ಸಂಸ್ಥಾಪಕರು:
ಮೆಕ್ಯಾನಿಕಲ್ ಇಂಜಿನಿಯರ್, ಪೈಲಟ್ ಮತ್ತು ಉದ್ಯಮಿಯಾಗಿರುವ ಕ್ಯಾಪ್ಟನ್ ವರುಣ್ ಸುಹಾಗ್ ಹಾಗೂ ಕ್ಯಾಪ್ಟನ್ ಪೂನಂ ಗೌರ್ ಅವರು ಸ್ಥಾಪಿಸಿರುವ ಏರ್ ಟ್ಯಾಕ್ಸಿ ಅಕಾಡೆಮಿ ಇದಾಗಿದೆ. ವಾಯುಯಾನದಲ್ಲಿ ಬಹಳ ಆಳವಾದ ಅಧ್ಯಯನ ಹಾಗೂ ಆಸಕ್ತಿ ಹೊಂದಿರುವ ಇವರು, ಏರ್ ಡೆಕ್ಕನ್, ಇಂಡಿಗೋ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.