* ನೆಟ್‌ಕಲ್ ಬಳಿಯ ಸಮತೋಲನ ಜಲಾಶಯದಿಂದ ರಾಮನಗರಕ್ಕೆ ನೀರು ಪೂರೈಕೆ
* ತೊರೆಕಾಡನಹಳ್ಳಿಯಿಂದ ಪೈಪ್‌ನಲ್ಲಿ ರವಾನೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲಾ ಕೇಂದ್ರ ರಾಮನಗರಕ್ಕೆ 24*7 ಕುಡಿಯುವ ನೀರು ಪೂರೈಕೆ ಮಾಡುವ ಮಹಾತ್ವಾಕಾಂಕ್ಷೆ ಯೋಜನೆ ಪ್ರಾಯೋಗಿಕವಾಗಿ ಚಾಲನೆಗೊಂಡಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಸಮೀಪದ ನೆಟ್‌ಕಲ್ ಬಳಿಯ ಸಮತೋಲನ ಜಲಾಶಯದಿಂದ ರಾಮನಗರಕ್ಕೆ ನೀರು ಪೂರೈಕೆ ಮಾಡುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇರುವ ಸಣ್ಣಪುಟ್ಟ ಅಡೆತಡೆಗಳನ್ನು ನಿವಾರಿಸಿಕೊಂಡು ನಿರಂತರವಾಗಿ ನೀರು ಪೂರೈಕೆ ಮಾಡುವ ಸಲುವಾಗಿ ಪ್ರಾಯೋಗಿಕ ಚಾಲನೆ ನೀಡಲಾಗಿದೆ.
ಜೆೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ 2019ರಲ್ಲಿ ರಾಮನಗರಕ್ಕೆ ನಿರಂತರವಾಗಿ ನೀರು ಪೂರೈಕೆ ಮಾಡುವ ಎಕ್ಸ್‌ಪ್ರೆಸ್ ಯೋಜನೆಗಾಗಿ 456 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಯೋಜನೆಗೆ ಚಾಲನೆ ದೊರೆತರೂ, ಕರೊನಾ ಕಾಲದ ವಿಳಂಬ ಹಾಗೂ ಪೈಪ್‌ಲೈನ್ ಹಾದು ಹೋಗುವ ದಾರಿಯಲ್ಲಿ ಜಮೀನು ನೀಡಲು ರೈತರು ನಿರಾಕರಿಸಿದ ಕಾರಣದಿಂದಾಗಿ ಸುಮಾರು ಒಂದು ವರ್ಷ ತಡವಾಗಿ ಯೋಜನೆ ಪೂರ್ಣಗೊಂಡಿದೆ.
ಪ್ರಸ್ತುತ ರಾಮನಗರದ ಜನ ಸಂಖ್ಯೆ 1.40 ಲಕ್ಷ ಇದ್ದು, ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ಕೇವಲ 7-8 ಎಂಎಲ್‌ಡಿ ಹಾಗೂ ಸ್ಥಳೀಯವಾಗಿ ದೊರೆಯುವ ನೀರಿನ ಮೂಲಗಳು ಮಾತ್ರ. ಆದರೆ, ಹೊಸ ಯೋಜನೆಯಿಂದ ರಾಮನಗರಕ್ಕೆ 20-25 ಎಂಎಲ್‌ಡಿ ನೀರು ಪೂರೈಕೆ ಆಗುತ್ತದೆ. ಆದರೆ, ಭವಿಷ್ಯದಲ್ಲಿ ರಾಮನಗರ ಅಭಿವೃದ್ಧಿ ಹೊಂದಿ ಜನಸಂಖ್ಯೆಯೂ ಹೆಚ್ಚುವ ಕಾರಣ, 2055ರ ವೇಳೆಯ ಬಳಕೆಗೆ ಅನುಗುಣವಾಗಿ ಸಾಮರ್ಥ್ಯವನ್ನು 68 ಎಂಎಲ್ ಡಿ ಹೆಚ್ಚಿಸಿಕೊಳ್ಳಬಹುದಾಗಿದೆ.
ನೆಟ್‌ಕಲ್ ಜಲಾಶಯದಿಂದ ಹಾಲಿ ನೀರು ಪೂರೈಕೆ ಮಾಡಲಾಗುತ್ತಿರುವ ತೊರೆಕಾಡನಹಳ್ಳಿಯಿಂದ ನೀರು ಸಂಗ್ರಹ ಕೇಂದ್ರಕ್ಕೆ ಸುಮಾರು 10 ಕಿಮೀ ಗುರುತ್ವಾಕರ್ಷಣೆ ಮೂಲಕವೇ ಪೈಪ್ ಲೈನ್ ಮೂಲಕ ನೀರು ಹರಿದು ಬರಲಿದೆ.
ನಂತರ ಅಲ್ಲಿಂದ ರಾಮನಗರದ ಕೊತ್ತೀಪುರದಲ್ಲಿ 200 ಲಕ್ಷ ಲೀಟರ್ ಹಾಗೂ ಬೋಳಪ್ಪನಹಳ್ಳಿಯಲ್ಲಿ 100 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ನೀರನ್ನು ಪಂಪ್ ವಾಡಲು 800 ಎಚ್.ಪಿ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿ 2000 ಎಚ್.ಪಿ ಸಾಮರ್ಥ್ಯದ ಯಂತ್ರದಲ್ಲಿ ನೀರನ್ನು ಪಂಪ್ ವಾಡಬಹುದಾಗಿದೆ. ನೀರು ಪೂರೈಕೆಗಾಗಿ ಸುವಾರು 60 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದೆ.
ಈಗಾಗಲೇ ಈ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಕಾಮಗಾರಿ ವೇಳೆ ಪೈಪ್‌ಲೈನ್‌ಗಳಲ್ಲಿ ಸೇರಿರುವ ಗಲೀಜು ನೀರು ಮೊದಲ ಕೆಲವು ದಿನಗಳು ಹರಿಯಲಿದ್ದು, ನಂತರ ಹಾಲಿ ಇರುವ ಕೊಳವೆ ಸಂಪರ್ಕಗಳ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತದೆ. ಈ ವೇಳೆ ಕಂಡು ಬರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ನಿರಂತರವಾಗಿ 24*7 ನೀರು ಪೂರೈಕೆ ಮಾಡಲಾಗುತ್ತದೆ. ಬಹುತೇಕ ಈ ಕಾರ್ಯ ಪೂರ್ಣಗೊಳ್ಳಲು ಒಂದು ತಿಂಗಳ ಅಗತ್ಯವಿದೆ. ಆಗಸ್ಟ್ ಮೊದಲ ವಾರದಿಂದಲೇ ರಾಮನಗರ ನೀರಿನ ಬವಣೆಗೆ ಬ್ರೇಕ್ ಬೀಳಲಿದ್ದು, ನಿರಂತರವಾಗಿ ನೀರು ಪೂರೈಕೆ ಆಗಲಿದೆ.
ಪ್ರಾಯೋಗಿಕವಾಗಿ ಹಳೇ ಕೊಳಾಯಿ ಸಂಪರ್ಕಗಳ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಇದು ಕೇವಲ ತಾತ್ಕಾಲಿಕ. ನಿರಂತರವಾಗಿ ನೀರು ಬಳಕೆ ಮಾಡಬೇಕಿದ್ದರೆ ಹೊಸ ಸಂಪರ್ಕವನ್ನು ಪಡೆದುಕೊಳ್ಳಲೇಬೇಕಿದೆ. ಹೊಸ ಸಂಪರ್ಕ ಪಡೆದುಕೊಳ್ಳಬೇಕಿದ್ದರೆ ನೀರು ಪೂರೈಕೆ ಹಳೇ ಬಾಕಿಗಳನ್ನು ಪಾವತಿ ಮಾಡಲೇಬೇಕಿದೆ. ಹಳೇ ಬಾಕಿ ಕಟ್ಟದಿದ್ದರೆ ಹೊಸ ಸಂಪರ್ಕ ದೊರೆಯುವುದಿಲ್ಲ. ಹೊಸ ಸಂಪರ್ಕ ಪಡೆದ ನಂತರ ಮೀಟರ್ ಅಳವಡಿಕೆ ಆಗಲಿದ್ದು, ನೀರು ಅಳವಡಿಕೆಗೆ ಅನುಗುಣವಾಗಿ ಬಿಲ್ ಕಟ್ಟಬೇಕಿದೆ.
ಈಗಾಗಲೇ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಎದುರಾಗಬಹುದಾದ ಸಮಸ್ಯೆಗಳನ್ನು ಸರಿಪಡಿಸಿಕೊಂಡು ರಾಮನಗರ ಜನತೆಗೆ ನೀರು ಪೂರೈಕೆ ಮಾಡಲಾಗುವುದು. ಹೊಸ ಸಂಪರ್ಕ ಪಡೆದುಕೊಳ್ಳಲು ಹಳೆ ಬಿಲ್ ಕಟ್ಟಲೇಬೇಕಿದೆ. ಕುಸುಮಾ, ಎಇಇ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಚನ್ನಪಟ್ಟಣ ಉಪವಿಭಾಗ