ಪೈಲೆಟ್​ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಮಗ ಆದಿತ್ಯ ಹಾಗೂ ಸೊಸೆ ದಿಶಾ ಅವರೊಂದಿಗೆ ಬೆಳಗಾವಿಯ ಪದ್ಮಜಾ ಮಣ್ಣೂರ. 
ಜಿಲ್ಲೆ

242 ಭಾರತೀಯರ ಕರೆತಂದ ದಿಶಾ ಮಣ್ಣೂರ..

Webdesk - Ravikanth

| ರವಿ ಗೋಸಾವಿ ಬೆಳಗಾವಿ

ಯುದ್ಧಪೀಡಿತ ಯೂಕ್ರೇನ್​ನಲ್ಲಿದ್ದ ಭಾರತೀಯರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತಂದ ನಾಲ್ವರು ಪೈಲಟ್​ಗಳ ಕಾರ್ಯ ಇದೀಗ ದೇಶದ ಗಮನ ಸೆಳೆದಿದೆ. ಆ ನಾಲ್ವರು ಪೈಲಟ್​ಗಳ ಪೈಕಿ ಬೆಳಗಾವಿಯ ಸೊಸೆ ದಿಶಾ ಮಣ್ಣೂರ ಇರುವುದು ವಿಶೇಷ. ಅವರ ಹುಟ್ಟೂರು ಕೋಟಾ. ಏರ್ ಇಂಡಿಯಾದ ‘ಸಿಂಗಲ್ ಲೆಗ್ ರೆಸ್ಕ್ಯೂ ಆಪರೇಷನ್’ನಲ್ಲಿ ಪಾಲ್ಗೊಂಡ ದಿಶಾ ಮಣ್ಣೂರು, ಯೂಕ್ರೇನ್​ನ ಕಿಯೆವ್ ಏರ್ ಪೋರ್ಟ್​ಗೆ ವಿಮಾನ ಲ್ಯಾಂಡ್ ಮಾಡಿದ್ದರು.

ಭಾರತೀಯರ ರಕ್ಷಣೆಗೆ ದೆಹಲಿಯಿಂದ ಫೆ. 22ರಂದು ಹೊರಟ ‘ಡ್ರೀಮ್ ಲೈನರ್ ಏರ್ ಕ್ರಾಫ್ಟ್’ ವಿಮಾನ ಚಾಲನೆ ಮಾಡಿದ ದಿಶಾ ಆದಿತ್ಯ ಮಣ್ಣೂರ, ಬೆಳಗಾವಿಯ ಸದಾಶಿವ ನಗರದ ನಿವಾಸಿ ಪದ್ಮಜಾ ಅವರ ಸೊಸೆ. ಅವರ ಪುತ್ರ ಆದಿತ್ಯ ಕೂಡ ಪೈಲೆಟ್ ಆಗಿ ಕಾರ್ಯ ನಿರ್ವಸುತ್ತಿದ್ದಾರೆ. ದಂಪತಿಯಿಬ್ಬರೂ ದೆಹಲಿಯಲ್ಲೇ ವಾಸವಾಗಿದ್ದು, ರಜೆ ಸಿಕ್ಕಾಗಲೆಲ್ಲ ಬೆಳಗಾವಿಗೆ ಬಂದು ಹೋಗುತ್ತಾರೆ. 2011ರಲ್ಲಿ ನ್ಯೂಜಿಲೆಂಡ್​ನ ವೆಲ್ಲಿಂಗಟನ್​ನಲ್ಲಿ ಪೈಲೆಟ್ ತರಬೇತಿ ಪಡೆದ ದಿಶಾ, 2017ರಲ್ಲಿ ಏರ್ ಇಂಡಿಯಾ ಸಂಸ್ಥೆ ಸೇರಿದ್ದಾರೆ.