ಜಿಲ್ಲೆ

ಪಿಲಿಕುಳ ಕಂಬಳದ ಸಿದ್ಧತೆಗಳ ಪರಿಶೀಲನೆ

Mangaluru - Hariprasad Rai


ಮಂಗಳೂರು : ಪಿಲಿಕುಳದಲ್ಲಿ ನ.17 ಮತ್ತು 18ರಂದು ನಡೆಯಲಿರುವ ಪಿಲಿಕುಳ ಕಂಬಳದ ಹಿನ್ನೆಲೆಯಲ್ಲಿ ಸೋಮವಾರ ಕಂಬಳ ಕರೆಯಲ್ಲಿ ಸಿದ್ಧತೆಗಳ ಪರಿಶೀಲನೆ ನಡೆಯಿತು.
ಶಾಸಕರಾದ ಉಮಾನಾಥ ಕೋಟ್ಯಾನ್, ಮಂಜುನಾಥ ಭಂಡಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರ ನೇತೃತ್ವದಲ್ಲಿ ಪಿಲಿಕುಳ ಕಂಬಳ ಕರೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಾಯಿತು.
ಕಂಬಳದ ಕರೆ ಪುನರ್‌ನವೀಕರಣ ಬಹುತೇಕ ಅಂತಿಮಗೊಂಡಿದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಬೇಕಾದ ಸೌಲಭ್ಯ ಹಾಗೂ ಕಂಬಳ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ನಿರ್ಮಿಸುವ ಬಗ್ಗೆ ಸೂಚನೆ ನೀಡಲಾಯಿತು.
ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರದ ಆಯುಕ್ತರು ಕಂಬಳ ಸಿದ್ಧತೆಗಳ ಮೇಲ್ವಿಚಾರಣೆ ವಹಿಸಬೇಕು. ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಕಲ್ಪಿಸಬೇಕು.ವಿದ್ಯುತ್, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು ಪಿಲಿಕುಳ ಪ್ರಾಧಿಕಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿಯ ತಿಳಿಸಿದರು.
ಕಂಬಳದ ಹಿನ್ನೆಲೆಯಲ್ಲಿ ಪ್ರವೇಶದ್ವಾರ ನಿರ್ಮಾಣ, ಗುತ್ತು ಮನೆಯ ವಿದ್ಯುತ್ ಅಲಂಕಾರ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕು. ಜನಸಂದಣಿಯನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಂಬಳ ಕೂಟದಲ್ಲಿ 150ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಲಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ನವೀನ್ ಚಂದ್ರ ಆಳ್ವ, ಪ್ರಶಾಂತ್ ಕಾಜವ ಉಪಸ್ಥಿತರಿದ್ದರು.