ಜಿಲ್ಲೆ

ಕಲಬುರಗಿ‌ ಮಹಾದಾಸೋಹಿ ಶರಣಬಸವೇಶ್ವರರ ಗುಡಿಗೆ ಶ್ರಾವಣ ಸೋಮವಾರ ನಿಮಿತ್ತ ಭಕ್ತರ ದಂಡು

ಪಾದಯಾತ್ರೆ ಮೂಲಕ ಶರಣರ ಸನ್ನಿಧಿಗೆ | ಭಕ್ತಿಯಿಂದ ಜರುಗಿದ ಉಚ್ಛಾಯಿ |

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರ ಆರಾಧ್ಯ ದೈವ ಶರಣಬಸವೇಶ್ವರ ಸನ್ನಿಧಿಗೆ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬರುವ ಮೂಲಕ ಮಹಾದಾಸೋಹಿಗೆ ಶರಣೆಂದಿತು. ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೈವ ದರ್ಶನ ಪಡೆದುಕೊಂಡರು.
ಸೋಮವಾರ ನಸುಕಿನ ಜಾವ ೪ರಿಂದಲೇ ಭಕ್ತರು ಅಪ್ಪನ ಗುಡಿಯತ್ತ ಹೆಜ್ಜೆ ಹಾಕಿದರು. ಸ್ನಾನ ಮಾಡಿಕೊಂಡು ಮನೆಗಳಿಂದಲೇ ಗುಡಿವರೆಗೆ ಬರಿಗಾಲಲ್ಲಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸೂರ್ಯೋದಯದ ಹೊತ್ತಿಗೆ ದೇವಾಲಯ ಪರಿಸರದಲ್ಲಿ ಸಹಸ್ತಾರು ಭಕ್ತರು ಸೇರಿದ್ದರಿಂದ ಕಿರುಜಾತ್ರೆಯಂತೆ ಕಂಡು ಬಂದಿತು.
 ಮಹಾದಾಸೋಹಿ ಶರಣಬಸವೇಶ್ವರರ ದರುಶನ ಪಡೆಯಲು ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳಲು ಸಂಸ್ಥಾನದ ಆಡಳಿತ ಮಂಡಳಿಯವರು ಪ್ರತಿಯೊಬ್ಬರೂ ಸರದಿ ನಿಂತುಕೊಳ್ಳುವAತೆ ಬೆಲಗುಗಳನ್ನು ಕಟ್ಟಿ, ಬ್ಯಾರಿಕೇಡ್ ಹಾಕಿ ಅನುವು ಮಾಡಿಕೊಟ್ಟರು. ಸೂರ್ಯ ಏರಿದಂತೆ ಗುಡಿಗೆ ಬರುವ ಭಕ್ತರ ಸಂಖ್ಯೆಯೂ ಏರುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಪೊಲೀಸರು ಬಂದೋಬಸ್ತ್ ಮಾಡಿ ಹದ್ದಿನ ಕಣ್ಣಿಟ್ಟಿದ್ದರು.
ಶರಣರ ಸನ್ನಿಧಿಗೆ ವಿಶೇಷ ಅಭಿಷೇಕ, ಪೂಜೆ ಮಾಡಿಸಿದ ನಂತರ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಸಂಜೆ ಉಚ್ಛಾಯಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಶ್ರಾವಣ ಸೋಮವಾರಕ್ಕೆ ವಿಶೇಷತೆ ಇರುವುದರಿಂದ ಭಕ್ತರು ಶರಣ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಲ್ಲೂ ನಡುವಿನ ಸೋಮವಾರ ಜಾತ್ರೆಯಂತೆ ಆಗಲಿದೆ. ಕಲಬುರಗಿ ಜಿಲ್ಲೆಯ ಹಳ್ಳಿ-ಹಳ್ಳಿಗಳಿಂದ ಸೇರಿ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್ ಜಿಲ್ಲೆಯ ಭಕ್ತರು ಪಾದಯಾತ್ರೆ ಮೂಲಕ ಕಲಬುರಗಿಗೆ ಆಗಮಿಸಿ ಶರಣನ ದರ್ಶನ ಪಡೆದುಕೊಂಡರು.