ಮಂಗಳೂರು : ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಪಿಲಿನಲಿಕೆ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ ಮಿಥುನ್ ರೈ ಅವರ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ ‘ಪಿಲಿ ನಲಿಕೆ-7’ ಹುಲಿವೇಷ ಕುಣಿತ ಸ್ಪರ್ಧೆ ಅ.4ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.
2014ರಿಂದ ಪ್ರಾರಂಭಗೊಂಡಿರುವ ‘ಪಿಲಿ ನಲಿಕೆ’ ಕಾರ್ಯಕ್ರಮದ ಮೂಲಕ ತುಳುನಾಡಿನ ಅದ್ಭುತ ಕಲಾ ಪರಂಪರೆಯನ್ನು ದೇಶ ವಿದೇಶದಲ್ಲಿ ಪಸರಿಸುವ ಉದ್ದೇಶ ಹೊಂದಿದ್ದೇವೆ.ಪಿಲಿನಲಿಕೆ-7 ಸ್ಪರ್ಧಾಕಣದಲ್ಲಿ ತುಳುನಾಡಿನ ಪ್ರತಿಷ್ಠಿತ ಮತ್ತು ಆಹ್ವಾನಿತ 12 ತಂಡಗಳು ಭಾಗವಹಿಸಲಿದ್ದು ಬಹುಮಾನ ರೂಪದಲ್ಲಿ ಫಲಕ ಸಹಿತ ಪ್ರಥಮ 3 ಲಕ್ಷ ರೂ., ದ್ವಿತೀಯ 2 ಲಕ್ಷ ರೂ., ತೃತೀಯ 1 ಲಕ್ಷ ರೂ. ಹಾಗೂ ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ 50 ಸಾವಿರ ರೂ. ನಗದು ಬಹುಮಾನಗಳ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ತಾರಾ ಮೆರುಗು
ಪಿಲಿನಲಿಕೆ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಖ್ಯಾತ ತಾರೆಯರಾದ ಸುನಿಲ್ ಶೆಟ್ಟಿ, ಪೂಜಾ ಹೆಗ್ಡೆ , ಕಾಂತಾರ ಸಿನೆಮಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡ ಭಾಗವಹಿಸಲಿದ್ದಾರೆ.