ಜಿಲ್ಲೆ

ಧರ್ಮಾಧಿಕಾರಿ ಬೆಂಬಲಿಸಿ ಧರ್ಮಯಾತ್ರೆ

ಪ್ರಸಿನ್ ಕೆ.ಆರ್

ಹಾಸನ: ಧರ್ಮಸ್ಥಳದ ವಿರುದ್ಧ ಅಪ ಪ್ರಚಾರ, ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ ಮಾಜಿ ಎಂಎಲ್‌ಸಿ, ಚನ್ನರಾಯಪಟ್ಟಣದ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಶನಿವಾರ ಧರ್ಮಸ್ಥಳಕ್ಕೆ ಧರ್ಮಯಾತ್ರೆ ತೆರಳಿತು.

ಬೆಳಗ್ಗೆ ಚನ್ನರಾಯಪಟ್ಟಣದಿಂದ ಹೊರಟ ಯಾತ್ರೆ ಹಾಸನದ ಮೂಲಕ ಹಾದು, ಸಕಲೇಶಪುರ ಮೂಲಕ ಧರ್ಮಸ್ಥಳಕ್ಕೆ ತೆರಳಿತು. ನೂರಾರು ಕಾರು ಇತ್ಯಾದಿ ವಾಹನಗಳಲ್ಲಿ ಸಾವಿರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದರು.

ಈ ವೇಳೆ ಎಲ್ಲರೂ ಧರ್ಮ ಗೆಲ್ಲಬೇಕು, ನಾವೆಲ್ಲರೂ ಧರ್ಮಸ್ಥಳ, ಡಾ.ವೀರೇಂದ್ರ ಹೆಗ್ಗಡೆ ಅವರ ಪರ ಎಂದು ಘೋಷಣೆ ಕೂಗಿದರು.

ಈ ವೇಳೆ ಬೂವನಹಳ್ಳಿ ಕೂಡಿನಲ್ಲಿ ಮಾತನಾಡಿದ ಗೋಪಾಲಸ್ವಾಮಿ, ನಾವೆಲ್ಲರೂ ಹಿಂದಿನಿಂದಲೂ ಧರ್ಮಸ್ಥಳದ ಮಂಜುನಾಥನನ್ನು ಅಪಾರವಾಗಿ ನಂಬಿರುವವರು, ಧಾರ್ಮಿಕವಾಗಿ ಅಪಾರ ನಂಬಿಕೆ ಹೊಂದಿರುವವರು, ಯಾರೂ ಇದಕ್ಕೆ ಧಕ್ಕೆ ಉಂಟು ಮಾಡಬಾರದು. ಹೀಗಾಗಿ ಧರ್ಮಸ್ಥಳದ ಪರವಾಗಿ, ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ ಇಂದು ಧರ್ಮಯಾತ್ರೆ ಹೊರಟಿದ್ದೇವೆ, ಮಂಜುನಾಥನ ದರ್ಶನ ಮಾಡಿ, ಹೆಗ್ಗಡೆ ಅವರಿಗೆ ಧೈರ್ಯ ಹೇಳಿ ಮರಳುತ್ತೇವೆ ಎಂದರು.

ಸ್ತ್ರೀಶಕ್ತಿ ಸಂಘಗಳ ಸ್ಥಾಪನೆ, ಕೆರೆ ಅಭಿವೃದ್ಧಿ, ಹೈನುಗಾರಿಕೆಗೆ ಉತ್ತೇಜನ, ಶುದ್ಧ ಕುಡಿಯುವ ನೀರಿನ ಘಟಕ ಹೀಗೆ ಸರ್ಕಾರದ ರೀತಿಯಲ್ಲೇ ಹಲವು ಕೆಲಸ-ಕಾರ್ಯ ಹಾಗೂ ಮಹಿಳಾ ಸಬಲೀಕರಣವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಯಾವುದೇ ಆರೋಪ ಇರಲಿ ಅದರ ಸತ್ಯಾಸತ್ಯತೆ ಬಯಲಾಗಬೇಕು. ಆ ಕಾರಣಕ್ಕೆ ನಮ್ಮ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಆದರೆ ವಿಪಕ್ಷ ಬಿಜೆಪಿ ಟೀಕೆ ಮಾಡುವುದು, ರಾಜಕೀಯ ಪ್ರೇರಿತವಾಗಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.

ಡಿ.ಕೆ.ಶಿವಕುಮಾರ್ ಅವರು ಒಬ್ಬ ಭಕ್ತನಾಗಿ ಧರ್ಮಸ್ಥಳದ ಷಡ್ಯಂತ್ರ ನಡೆಯುತ್ತಿದೆ ಎಂದು ಮಾತನಾಡಿದ್ದಾರೆ. ಆದರೆ ಅವರು ರಾಜಕೀಯ ಬೆರೆಸಿಲ್ಲ. ಆದರೆ ಸಣ್ಣಪುಟ್ಟದಕ್ಕೂ ರಾಜಕೀಯ ಮಾಡುತ್ತಿರುವುದು ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.

ನಾನು ರಾಜಕಾರಣಿಯಾಗಿ ಅಲ್ಲ, ಒಬ್ಬ ಭಕ್ತನಾಗಿ ಧರ್ಮಯಾತ್ರೆ ಕೈಗೊಂಡಿದ್ದೇನೆ. ಕೋಟಿಕೋಟಿ ಜನರ ಭಕ್ತಿಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಯಾರೂ ಕೂಡ ಷಡ್ಯಂತ್ರ ಮಾಡಬಾರದು ಎಂದು ಮನವಿ ಮಾಡಿದರು.

ವಕೀಲರಿಂದಲೂ ಧರ್ಮಯಾತ್ರೆ:

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ನೂರಾರು ವಕೀಲರೂ ಸಹ ಶ್ರೀ ಕ್ಷೇತ್ರಕ್ಕೆ ಧರ್ಮಯಾತ್ರೆ ಕೈಗೊಂಡರು.

ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯಿಂದ ವಕೀಲರ ನಡೆ ಧರ್ಮಸ್ಥಳದ ಕಡೆ ಎಂಬ ಘೋಷಣೆಯೊಂದಿಗೆ ವಕೀಲರ ಸಮೂಹ ನೂರಾರು ಕಾರುಗಳಲ್ಲಿ ತೆರಳಿತು.

ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲಾಯಿತು. ಈ ವೇಳೆ ಮಹೇಶ್‌ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಮೊದಲಾದವರು ಸೇರಿ ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿರುವುದು ಈಗ ಬಯಲಾಗಿದೆ. ವಕೀಲರು ಯಾವತ್ತೂ ಧರ್ಮಸ್ಥಳದ ಜತೆಗಿದ್ದೇವೆ ಎಂದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಮೊಗಣ್ಣಗೌಡ, ಸಂಚು ರೂಪಿಸಿದವರ ವಿರುದ್ಧ ಕ್ರಮ ಆಗಲಿ ಎಂದು ಒತ್ತಾಯಿಸಿದರು. ನಂತರ ಬೆಂಗಳೂರಿನಿಂದ ಆಗಮಿಸಿದ್ದ ವಕೀಲರ ಜತೆ ಜಿಲ್ಲೆಯವರೂ ಧರ್ಮಸ್ಥಳಕ್ಕೆ ತೆರಳಿದರು.