ಜಿಲ್ಲೆ

ಪ್ರವಾಸಿಗರ ಅನುಕೂಲಕ್ಕೆ ಯಾತ್ರೀ ನಿವಾಸ ರೆಡೀ! : ಉರುಸ್‌ಗೆ ಬರುವ ಅತಿಥಿಗಳ ಅನುಕೂಲಕ್ಕೆ ಲಭ್ಯ : ನಾಲ್ಕನೇ ನಿವಾಸ ಮಂಜನಾಡಿಯಲ್ಲಿ ನಿರ್ಮಾಣ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಐದು ವರ್ಷಗಳ ಹಿಂದೆ ನಡೆದಿದ್ದ ಶಿಲಾನ್ಯಾಸ, ಕೊನೆಗೂ ಕಾಮಗಾರಿ ಸಂಪೂರ್ಣಗೊಂಡು ಈ ಬಾರಿಯ ಉರುಸ್‌ಗೆ ಬರುವ ಅತಿಥಿಗಳು, ಯಾತ್ರಿಕರ ಅನುಕೂಲಕ್ಕೆ ಲಭ್ಯವಾಗಿದೆ, ಎನ್ನುವ ಸಂತೃಪ್ತಿ ಆಡಳಿತ ಸಮಿತಿಯದ್ದು. ಇದು ಮಂಜನಾಡಿಯಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಯಾತ್ರೀ ನಿವಾಸದ ಕಥೆ!

ಇತಿಹಾಸ ಪ್ರಸಿದ್ಧ ಪುರಾತನ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳಿಗೆ ದೂರದೂರಿನಿಂದ ಬರುವ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ ಯೋಜನೆಯೇ ಯಾತ್ರೀ ನಿವಾಸ. ಉಳ್ಳಾಲ ತಾಲೂಕಿನಲ್ಲಿ ನಾಲ್ಕನೇ ನಿವಾಸ ಮಂಜನಾಡಿಯಲ್ಲಿ ನಿರ್ಮಾಣಗೊಂಡಿದೆ.

30ನೇ ಉರುಸ್ ಸಂಭ್ರಮ: ಮಂಜನಾಡಿ ಮಸೀದಿಗೆ 800 ವರ್ಷಗಳ ಇತಿಹಾಸವಿದೆ. ಇಲ್ಲಿನ ಬುಸ್ತಾನುಲ್ ಉಲೂಮ್ ಮದ್ರಸಾ ಮತ್ತು ಜುಮಾ ಮಸೀದಿಯಲ್ಲಿ 300 ವರ್ಷಗಳಿಂದ ಅಂತ್ಯ ವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾ ಬುಖಾರಿ ತಂಬಳ್ ಅವರ ಹೆಸರಲ್ಲಿ 50 ವರ್ಷಗಳಿಂದ ಉರುಸ್ ನಡೆಸುತ್ತಾ ಬರಲಾಗಿದ್ದು ಡಿ.17ರಿಂದ 27ರವರೆಗೆ ನಡೆಯಲಿರುವ 30ನೇ ಉರುಸ್ ಕಾರ್ಯಕ್ರಮದ ಸಿದ್ಧತೆಯಲ್ಲಿ ಆಡಳಿತ ಸಮಿತಿ ತೊಡಗಿಸಿಕೊಂಡಿದೆ.

ವಸತಿಗಳ ಕೊರತೆ: ಮಂಗಳೂರು ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಮಂಜನಾಡಿ ಜುಮಾ ಮಸೀದಿ ನಾಟೆಕಲ್‌ನಿಂದ ಆರು ಕಿ.ಮೀ. ಅಂತರದಲ್ಲಿದೆ. ಇದು ಗ್ರಾಮೀಣ ಪ್ರದೇಶ ಆಗಿರುವುದರಿಂದ ದೂರದೂರಿನಿಂದ ಬರುವ ಯಾತ್ರಿಕರಿಗೆ ತಂಗಲು ವಸತಿಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಿರ್ಮಾಣಗೊಂಡಿರುವ ಯಾತ್ರೀ ನಿವಾಸ ಅನುಕೂಲ ಆಗಲಿದ್ದು ಹೆಚ್ಚಿನ ಯಾತ್ರಿಕರನ್ನೂ ಸೆಳೆಯಲು ಸಾಧ್ಯವಾಗಲಿದೆ.

ಕ್ಷೇತ್ರದಲ್ಲಿ ನಾಲ್ಕನೇ ನಿವಾಸ: ಮಂಜನಾಡಿಯಲ್ಲಿ ಯಾತ್ರೀ ನಿವಾಸ ಪೂರ್ಣಗೊಳ್ಳುವ ಮೂಲಕ ಉಳ್ಳಾಲ ವ್ಯಾಪ್ತಿಯಲ್ಲಿ ನಾಲ್ಕು ಧಾರ್ಮಿಕ ಕ್ಷೇತ್ರಗಳಲ್ಲಿ ನಿವಾಸ ಎದ್ದು ನಿಂತಂತಾಗಿದೆ. ಪ್ರಥಮ ನಿವಾಸ ಮುಡಿಪು ಚರ್ಚ್ ಆವರಣದಲ್ಲಿ ನಿರ್ಮಾಣಗೊಂಡಿದ್ದರೆ ಎರಡನೆಯದ್ದು ಉಳ್ಳಾಲ ದರ್ಗಾ ಆವರಣದಲ್ಲಿ ನಿರ್ಮಾಣಗೊಂಡಿದೆ.

ಜಮೀನು ಸಮಸ್ಯೆ: ಸೋಮೇಶ್ವರ ಕ್ಷೇತ್ರಕ್ಕೆ ಯಾತ್ರೀ ನಿವಾಸ ಮಂಜೂರಾಗಿದ್ದರೂ ಜಮೀನಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರಕ್ಕೆ ವರ್ಗಾವಣೆಗೊಂಡಿತ್ತು. ತೊಕ್ಕೊಟ್ಟು ಚರ್ಚ್ ಬಳಿ ಶಿಲಾನ್ಯಾಸ ನಡೆದರೂ ಸರ್ಕಾರದ ಕಾಮಗಾರಿ ಬಗ್ಗೆ ಅರಿವಿದ್ದ ಕಾರಣ ಸರ್ಕಾರಿ ಕಟ್ಟಡ ನಿರಾಕರಿಸಿ ಚರ್ಚ್ ವತಿಯಿಂದಲೇ ಸಭಾಂಗಣ ನಿರ್ಮಿಸಲಾಗಿತ್ತು. ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ ಸ್ವತಃ ಗುತ್ತಿಗೆದಾರರೂ ಆಗಿರುವುದರಿಂದ ಇಲ್ಲಿನ ಯಾತ್ರೀ ನಿವಾಸವನ್ನು ಭಕ್ತರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಶೌಚಗೃಹ ಸಹಿತ ಶರವೇಗದಲ್ಲಿ ಕಟ್ಟಡ ನಿರ್ಮಿಸಿದ್ದರು. ಮುಡಿಪುವಿನಲ್ಲೂ ಅಲ್ಪ ಸಮಯದಲ್ಲೇ ನಿವಾಸ ಎದ್ದು ನಿಂತಿತ್ತು. ಆದರೆ ಉಳ್ಳಾಲ ಮತ್ತು ಮಂಜನಾಡಿ ಕಾಮಗಾರಿ ಕುಂಟುತ್ತಾ ಸಾಗಿ ಸಂಪೂರ್ಣಗೊಳ್ಳಲು ನಾಲ್ಕೈದು ವರ್ಷಗಳೇ ಹಿಡಿದು ಸರ್ಕಾರಿ ಅವ್ಯವಸ್ಥೆಗೆ ಸಾಕ್ಷಿಯಾಯಿತು.

ಇಲ್ಲಿನ ದರ್ಗಾಕ್ಕೆ ರಾಜ್ಯಾದ್ಯಂತ ಜನ ಬರುವುದರಿಂದ ಯಾತ್ರೀ ನಿವಾಸದಿಂದ ಪ್ರವಾಸಿಗಳಿಗೆ ಅನುಕೂಲ ಆಗಲಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಈ ಬಾರಿಯ ಉರುಸ್‌ಗೆ ಬರುವ ದೂರದೂರಿನ ಅತಿಥಿಗಳು, ಜನರ ಬಳಕೆಗೆ ಸಿಗಲಿದೆ. ಅಬ್ದುಲ್ ಅಝೀಝ್ ಮೈಸೂರು ಬಾವ ಅಧ್ಯಕ್ಷ, ಮಂಜನಾಡಿ ಬುಸ್ತಾನುಲ್ ಉಲೂಮ್ ಮದ್ರಸಾ ಮತ್ತು ಜುಮಾ ಮಸೀದಿ ಪ್ರಸಿದ್ಧ ಕ್ಷೇತ್ರಗಳಿಗೆ ಬರುವ ಯಾತ್ರಿಕರ ಅನುಕೂಲಕ್ಕೆ ನಿರ್ಮಿಸಲಾಗುವ ಸರ್ಕಾರದ ಯಾತ್ರೀ ನಿವಾಸ ಉತ್ತಮ ಯೋಜನೆ. ಸೋಮೇಶ್ವರದಲ್ಲಿ ಸಮಸ್ಯೆಯಿಂದಾಗಿ ಭಗವತೀ ಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ. ಸುರೇಶ್ ಭಟ್ನಗರ ಆಡಳಿತ ಮೊಕ್ತೇಸರ, ಶ್ರೀ ಚೀರುಂಭ ಭಗವತೀ ಕ್ಷೇತ್ರ