ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಪೆರಮಗೊಂಡನಹಳ್ಳಿಯಿಂದ ಹೊರಟ ಹನುಮಂತ(ಎತ್ತು) ಮಂತ್ರಾಲಯದಲ್ಲಿ ಪೂಜೆ ಮುಗಿಸಿ ವಾಹನದಲ್ಲಿ ಮುಂದಿನ ತೀರ್ಥ ಕ್ಷೇತ್ರಕ್ಕೆ ಹೊರಟಿರುವುದು. 
ಜಿಲ್ಲೆ

ಆಯೋಧ್ಯೆ ತೀರ್ಥಯಾತ್ರೆ ಹೊರಟ ಬಸವ

ಶಿವರಾಜ.ಎಂ

ತೂಬಗೆರೆ ಹೋಬಳಿಯಿಂದ ಹೊರಟ ಹನುಮಂತ ಹೆಸರಿನ ಎತ್ತು

ತೀರ್ಥಯಾತ್ರೆಗೆ 30 ಲಕ್ಷ ರೂ.ವಿನ್ಯಾಸನ ವಿಶೇಷ ವಾಹನ


ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯಿಂದ ಹನುಮಂತ ಹೆಸರಿನ ಬಸವ (ಎತ್ತು) ತೀರ್ಥಯಾತ್ರೆಗೆ ಹೊರಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದೆ.
ಸಾಮಾನ್ಯವಾಗಿ ಹಿರಿಯರು ತಮ್ಮ ಜೀವಿತಾವಧಿಯ ಸಂಧ್ಯಾಕಾಲದಲ್ಲಿ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಹೊರಡುವುದು ಸಾಮಾನ್ಯ. ಅದೇ ರೀತಿ ವಯಸ್ಸಾದ ಪಾಲಕರನ್ನು ಮಕ್ಕಳು ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುವುದನ್ನು ಕಾಣುತ್ತೇವೆ ಆದರೆ ಇಲ್ಲಿನ ಪೆರಮಗೊಂಡನಹಳ್ಳಿಯ ದಿನ್ನೆ ಆಂಜನೇಯಸ್ವಾಮಿ ದೇವಸ್ಥಾನದ ಆರ್ಚಕ ವಾಸುದೇವಚಾರ್ ಎಂಬುವರು ಎತ್ತೊಂದನ್ನು ತೀರ್ಥಯಾತ್ರೆಗೆ ಕರೆದೊಯ್ಯುತ್ತಿದ್ದು, ಇದಕ್ಕಾಗಿಯೇ ವಿಶೇಷ ವಾಹನ ಸಿದ್ಧಪಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
30 ಲಕ್ಷ ರೂ. ಖರ್ಚು: ಶ್ರೀರಾಮನ ಪರಮಭಕ್ತರಾಗಿರುವ ವಾಸುದೇವಚಾರ್ ಅವರು ಎತ್ತೊಂದನ್ನು ಸಾಕಿ ಇದಕ್ಕೆ ಹನುಮಂತ ಎಂದು ನಾಮಕರಣ ಮಾಡಿದ್ದಾರೆ. ಹನುಮಂತ ಹೆಸರಿನ ಎತ್ತಿನೊಂದಿಗೆ ಆಯೋಧ್ಯೆಯ ಶ್ರೀರಾಮನ ದರ್ಶನ ಮಾಡಿಸಬೇಕೆಂಬ ಸಂಕಲ್ಪ ತೊಟ್ಟು ಇದಕ್ಕಾಗಿಯೇ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಹನುಮಂತನ ಕರೆದೊಯ್ಯಲು 30 ಲಕ್ಷ ರೂ.ವೆಚ್ಚದಲ್ಲಿ ವಿಶೇಷವಾಗಿ ವಾಹನವನ್ನು ವಿನ್ಯಾಸ ಮಾಡಿಸಿದ್ದಾರೆ. ಬಸ್‌ನ ಒಂದು ಭಾಗದಲ್ಲಿ ಹನುಮಂತನಿಗೆ ಬೇಕಾದ ಮೇವು, ನೀರು, ಮತ್ತೊಂದು ಭಾಗದಲ್ಲಿ ಮೆತ್ತನೆಯ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. 6 ಜನರ ತಂಡ ಹನುಮಂತನ ಜತೆಗೆ ತೀರ್ಥಯಾತ್ರೆ ಸಜ್ಜಾಗಿದ್ದಾರೆ. ಸೆ.20 ರಂದು ಪ್ರಯಾಣ ಆರಂಭಿಸಿದ್ದು ಸುಮಾರು 18 ದಿನ ಪ್ರಯಾಣದ ಮೂಲಕ ಆಯೋಧ್ಯೆ ಸೇರುವ ಗುರಿ ಹೊಂದಲಾಗಿದೆ.
ನೇಪಾಳಕ್ಕೂ ಭೇಟಿ: ಮೊದಲಿಗೆ ಮಂತ್ರಾಲಯದ ರಾಯರ ದರ್ಶನದಿಂದ ತೀರ್ಥಯಾತ್ರೆ ಪ್ರಾರಂಭವಾಗಿದೆ. ಆನಂತರ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನ ಮಾಡಿಕೊಂಡು, ಗಂಗಾನದಿಯಲ್ಲಿ ಸ್ನಾನ ಮಾಡಿಸಿ, ಮುಂದೆ ಕಾಶಿ, ಗಯಾ ಹಾಗೂ ನೇಪಾಳದ ಸಾಲಿಗ್ರಾಮಕ್ಕೆ ಭೇಟಿ ನೀಡುವ ಇರಾದೆ ಇದೆ ಎಂದು ವಾಸುದೇವಚಾರ್ ತಿಳಿಸಿದ್ದಾರೆ.
ಹನುಮಂತನಿಗೆ ತರಬೇತಿ: ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಸಾವಿರಾರು ಕಿ.ಮೀ ಕ್ರಮಿಸಬೇಕಿರುವುದರಿಂದ ಇದಕ್ಕಾಗಿಯೇ ಒಂದೂವರೆ ವರ್ಷದಿಂದ ಹನುಮಂತನಿಗೆ ವಾಹನದ ಪ್ರಯಾಣದ ಅನುಭವ ಮಾಡಿಸಲಾಗಿದೆ. ಇದಕ್ಕೂ ಮೊದಲು ಶಾಲಾ ವಾಹನಗಳಲ್ಲಿ ನೆರೆಯ ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಗೆ ಹನುಮಂತನನ್ನು ಕರೆದೊಯ್ಯುದು ಅಭ್ಯಾಸ ಮಾಡಿಸಲಾಗಿದೆ. ಪ್ರಸ್ತುತ ಹನುಮಂತನಿಗೆ ವಾಹನದ ಪ್ರಯಾಣ ಚೆನ್ನಾಗಿ ಅಭ್ಯಾಸವಾಗಿದ್ದು ಈ ದೀರ್ಘಯಾತ್ರೆಗೆ ಹನುಮಂತ ಒಗ್ಗಿಕೊಳ್ಳಲಿದ್ದಾನೆ ಎಂದು ಅರ್ಚಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ನೆರೆಯ ಜಿಲ್ಲೆಗಳಲ್ಲಿ ನಡೆಯುವ ಶುಭಸಮಾರಂಭಗಳಿಗೂ ವಾಹನಗಳಲ್ಲಿ ಹನುಮಂತ ಪ್ರಯಾಣ ಬೆಳೆಸಿರುವುದರಿಂದ ಬಾಲರಾಮನ ದರ್ಶನದ ಪ್ರಯಾಣಕ್ಕೆ ಯಾವುದೇ ಆತಂಕವಿಲ್ಲ ಎಂಬುದು ಆಯೋಜಕರ ವಿಶ್ವಾಸವಾಗಿದೆ.