ಜಿಲ್ಲೆ

ಕುಮಾರನಗರದಲ್ಲಿ ತ್ಯಾಜ್ಯ ರಾಶಿ…ಜನರಿಗೆ ರೋಗ ಭೀತಿ..

ಅಕ್ಕಿಆಲೂರ: ಪಟ್ಟಣದ ಕುಮಾರನಗರದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಗಲೀಜು ಸ್ಥಳವಾಗಿ ಪರಿವರ್ತನೆಯಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ವಾತಾವರಣ ಸಂಪೂರ್ಣ ಹದಗೆಟ್ಟು ಗಬ್ಬು ವಾಸನೆ ಹರಡುತ್ತಿದೆ. ಸುತ್ತಮುತ್ತಲ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಗ್ರಾಪಂನ 10 ವಾರ್ಡ್​ಗಳ ಪೈಕಿ 1ನೇ ವಾರ್ಡ್​ಗೆ ವ್ಯಾಪ್ತಿಗೆ ಒಳಪಡುವ ಕುಮಾರನಗರದಲ್ಲಿ ನರಸಿಂಗನಗರ, ಬಾಳೂರ ರಸ್ತೆ ಸೇರಿಕೊಂಡಿವೆ. ನೌಕರರು, ಉದ್ಯಮಿಗಳೇ ಅಧಿಕ ಸಂಖ್ಯೆಯಲ್ಲಿ ನಿವಾಸಿಗಳಿರುವ ಕುಮಾರನಗರದಲ್ಲಿ ನರಸಿಂಗ್ ರಾವ್ ರಸ್ತೆಯಲ್ಲಿ ಪಕ್ಕಾ ಒಳಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ನೀರು ರಸ್ತೆ ಮತ್ತು ನಿವೇಶನಗಳ ಮೇಲೆಯೇ ಹರಿಯುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸಂಗ್ರಹಾಲಯ ಇಲ್ಲದ ಪರಿಣಾಮ ಜನತೆ ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ.

ಕುಮಾರನಗರದಲ್ಲಿ ಸಿಂಧೂರ ಸಿದ್ದಪ್ಪ ಕಾಲೇಜು, ನರಸಿಂಗ್ ದೇಸಾಯಿ ಕಾಲೇಜು, ಜಾಬೀನ್ ಡಿಗ್ರಿ ಕಾಲೇಜು, ಜ್ಞಾನಭಾರತಿ ಶಾಲೆಗಳು ಇದ್ದು, ನಿತ್ಯ ಇದೆ ರಸ್ತೆಯಲ್ಲಿ ಸಂಚರಿಸವ ಸಾವಿರಾರು ವಿದ್ಯಾರ್ಥಿಗಳು ಮೂಗುಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳುವವರಿಗೆ ಹಂದಿ, ನಾಯಿಗಳ ಕಾಟ ವಿಪರೀತವಾಗುತ್ತಿದೆ. ಕುಮಾರನಗರದ ಅಂತ್ಯದ ಬಾಳೂರ ರಸ್ತೆಯಲ್ಲಿ ಅಧಿಕ ತ್ಯಾಜ್ಯ ವಿಲೇವಾರಿಯಾಗುತ್ತಿದೆ. ಈ ಕುರಿತು ಅನೇಕ ಬಾರಿ ಸ್ಥಳೀಯ ಗ್ರಾಪಂಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಪಕ್ಕಾ ಚರಂಡಿಯ ವ್ಯವಸ್ಥೆ ಇಲ್ಲ

ಕುಮಾರನಗರದಲ್ಲಿ ಕೆಲವು ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ನರಸಿಂಗ್​ರಾವ್ ದೇಸಾಯಿ ಕಾಲೇಜು ಕಾಂಪೌಡ್​ಗೆ ಹತ್ತಿಕೊಂಡ ಸುಮಾರು 500 ಮೀಟರ್​ಗೂ ಅಧಿಕ ದೂರದಲ್ಲಿ ಎರಡೂ ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಸುಮಾರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಸಣ್ಣ ಚರಂಡಿ ಕಿತ್ತುಹೋಗಿದೆ. ಅಧಿಕ ಮಳೆ, ಮಣ್ಣು ತುಂಬಿಕೊಂಡು ಕಿತ್ತು ಹೋಗಿರುವ ಚರಂಡಿಯ ನೀರು ರಸ್ತೆ ಮತ್ತು ಪಕ್ಕದ ನಿವೇಶನಗಳಲ್ಲಿ ಹರಿಯುತ್ತಿದೆ.

ಖಾಲಿ ನಿವೇಶನಗಳದ್ದೇ ದೊಡ್ಡ ಸಮಸ್ಯೆ

ಕುಮಾರ ನಗರದಲ್ಲಿ ಖಾಲಿ ನಿವೇಶಗಳದ್ದೇ ಸ್ಥಳೀಯ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ನಿವೇಶನಗಳನ್ನು ಖರೀದಿಸಿ, ಪರಸ್ಥಳದಲ್ಲಿ ವಾಸವಿರುವ ಮಾಲೀಕರು, ನಿರ್ವಹಣೆ ಮಾಡದೆ ಇರುವುದರಿಂದ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳ ವಾಸಸ್ಥಳವಾಗಿ ಮಾರ್ಪಾಡಾಗುತ್ತಿದೆ. ಸತ್ತ ಪ್ರಾಣಿಗಳ ಗೊಬ್ಬು ವಾಸನೆಯಿಂದ ಎಷ್ಟೋ ಬಾರಿ ಸ್ಥಳೀಯ ನಿವಾಸಿಗಳು ತೀವ್ರ ಸಮಸ್ಯೆ ಅನುಭವಿಸಿದ ಸಾಕಷ್ಟು ನಿದರ್ಶನಗಳಿವೆ.

ಕುಮಾರನಗರ ಮತ್ತು ನರಸಿಂಗಾವ್ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಮತ್ತು ಖಾಲಿ ನಿವೇಶನದ ಸಮಸ್ಯೆ ಕುರಿತು ಸಾಕಷ್ಟು ಬಾರಿ ಗ್ರಾಪಂನ ಜನಪ್ರನಿಧಿನಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದ್ದೇವೆ. ಬಂದು ನೋಡಿಕೊಂಡು ಹೋಗಿದ್ದಾರೆ. ಹೊರತು ಯಾವುದೇ ಸ್ವಚ್ಛತೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಲು ಮುಂದಾಗಿಲ್ಲ. | ಶಿವಲಿಂಗೇಶ ನೆಲ್ಲಿಕೊಪ್ಪ, ಕುಮಾರನಗರದ ನಿವಾಸಿ ದೇಸಾಯಿ ಕಾಲೇಜಿನಿಂದ ಅಂಜುಮನ್ ಶಾದಿ ಮಹಲ್​ವರೆಗೂ ಚರಂಡಿ ಕಸ ಸಂಗ್ರಹ ಇಲ್ಲದೆ ಸಂಪೂರ್ಣ ಗಲೀಜು ಆಗಿರುವುದು ಗಮನಕ್ಕಿದೆ. ಅಕ್ಕಿಆಲೂರಿನಲ್ಲಿ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿಯಾಗಿದೆ. ಮುಂದೆ ಕುಮಾರನಗರದಲ್ಲಿ ಆದ ಸಮಸ್ಯೆ ಸರಿಪಡಿಸಿ ಅಭಿವೃದ್ಧಿ ಮಾಡಲಾಗುವುದು. | ಕುಮಾರ ಮಕರೊಳ್ಳಿ, ಅಕ್ಕಿಆಲೂರ ಪಿಡಿಒ