ಶಿಗ್ಗಾಂವಿ: ಪಟ್ಟಣದ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮತ್ತು ನಿರ್ವಹಣೆಗಾಗಿ ಸ್ಥಳೀಯ ಪುರಸಭೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸುರಿದರೂ ನಗರದ ಕಸದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಅಡಿಗಡಿಗೂ ಉದಾಹರಣೆಗಳು ಸಿಗುತ್ತವೆ.
ಪಟ್ಟಣದ ಹೃದಯ ಭಾಗದ ಪ್ರಮುಖ ಜಾಗಗಳು ಕಸ ಹಾಕುವ ತಾಣಗಳಾಗಿ ಮಾರ್ಪಟ್ಟಿವೆ. ಅಲ್ಲದೆ, ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿವೆ. ಕಸ ಹಾಕುವುದರಿಂದ ಅದು ಅಲ್ಲೆ ಕೊಳೆತು ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ರಸ್ತೆ ಬದಿ ಕಸ ಹಾಕುತ್ತಿರುವುದರಿಂದ ತ್ಯಾಜ್ಯವೆಲ್ಲ ಗಾಳಿಗೆ ಹಾರಿ ರಸ್ತೆಗೆ ಬರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿದಿನಗಳು ವಿಫಲರಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಒಂದು ಕಾಲದಲ್ಲಿ ಶಿಗ್ಗಾಂವಿ ಜನತೆಗೆ ನೀರಿನ ಮೂಲವಾಗಿದ್ದ ರಾಚನಕಟ್ಟೆ ಈಗ ಕಸ ಸಂಗ್ರಹಣೆ ಸ್ಥಳವಾಗಿ ಮಾರ್ಪಡುತ್ತಿದೆ. ಪ್ರತಿನಿತ್ಯ ಕೆಲವರು ಕಸ ತಂದು ಕೆರೆ ದಡದಲ್ಲಿ ತಂದು ಹಾಕುತ್ತಿರುವುದರಿಂದ ಕೆರೆ ಸುತ್ತ ಶುಚಿತ್ವ ಎಂಬುದು ಸ್ಥಳೀಯರ ಪಾಲಿಗೆ ಗಗನಕಸುಮವಾಗುತ್ತಿದೆ.
ಮುಖ್ಯ ರಸ್ತೆ, ಹೋಟೆಲ್, ಅಂಗಡಿ, ಮಳಿಗೆ, ಬಾರ್ ಹಾಗೂ ತಳ್ಳು ಗಾಡಿಗಳ ಮೇಲೂ ತ್ಯಾಜ್ಯ ಬಂದು ಸೇರುತ್ತಿದೆ. ಮನೆ ಕಟ್ಟುವವರು ತಮ್ಮ ಹಳೆಯ ಮನೆಯ ಕಲ್ಲು, ಮಣ್ಣು ಸೇರಿ ಮನೆಯಲ್ಲಿನ ಚಿಂದಿ ಸಾಮಗ್ರಿಗಳನ್ನು ಮುಖ್ಯ ರಸ್ತೆ ಮತ್ತು ರಸ್ತೆ ಪಕ್ಕದಲ್ಲಿ ಹಾಕುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ. ಬೈಕ್ ಸವಾರರು ಕಸದಲ್ಲಿ ಮಗುಚಿ ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ.
ಪುರಸಭೆ ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಂಡು ಕಸ ವಿಲೇವಾರಿ ನಿರ್ವಹಣೆ ಬಗ್ಗೆ ಸೂಕ್ತ ಕ್ರಮ ಕೆಗೊಳ್ಳಬೇಕಿದೆ. ನಗರದ ಸ್ವಚ್ಛತೆ, ಸೌಂದರ್ಯ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂಬುದು ನಾಗರಿಕರ ಮನವಿ.
ನೀಲಿನಕ್ಷೆ ತಯಾರು: ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿಪಡಿಸಿದ ರೀತಿಯಲ್ಲಿ 4.85 ಕೋಟಿ ರೂ. ಅನುದಾನದಲ್ಲಿ ರಾಚನಕಟ್ಟೆ ಕೆರೆ ಅಭಿವೃದ್ಧಿಪಡಿಸಲು ಸ್ಥಳೀಯ ಪುರಸಭೆಯು ನೀಲಿನಕ್ಷೆ ತಯಾರಿಸಲಾಗಿದೆ.
ನಿತ್ಯ ಇಲ್ಲಿ ಕಸ ತಂದು ಹಾಕುತ್ತಿರುವುದರಿಂದ ಮಲೇರಿಯಾ, ಡೆಂಘೆ ಸೇರಿ ಇನ್ನಿತರ ರೋಗಗಳು ತಗಲುತ್ತವೆಯೋ ಎಂಬ ಭಯ ಕಾಡುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಹದೇವ ಅಡರಕಟ್ಟಿ, ಸ್ಥಳೀಯ ನಿವಾಸಿ ಪಟ್ಟಣ ವ್ಯಾಪ್ತಿಯಲ್ಲಿ ಕೆಲವರು ನಿತ್ಯ ಸಂಗ್ರಹವಾಗುವ ಕಸವನ್ನು ಕೆರೆ ಪಕ್ಕದ ಮುಖ್ಯ ರಸ್ತೆಯಲ್ಲಿ ಹಾಕುತ್ತಿರುವುದರಿಂದ ಸುತ್ತಲಿನ ವಾತಾವರಣ ಸಂಪೂರ್ಣ ಕುಲುಸಿತಗೊಂಡು ಇಲ್ಲಿನ ಪರಿಸರ ಹಾಳಾಗುತ್ತಿದೆ. ಗಾಳಿಗೆ ಕಸ ರಸ್ತೆಗೆ ಹಾರಿ ಬರುತ್ತಿದೆ. ಇದರಿಂದ ವಾಹನ ಸವಾರರ ಸಂಚಾರಕ್ಕೂ ತೊಂದರೆಯಾಗಿದೆ. ಅಧಿಕಾರಿಗಳು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಪಟ್ಟಣದಿಂದ ಹೊರಗಡೆ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಸಿದ್ದಲಿಂಗೇಶ್ವರ ಅಕ್ಕಿ, ಸ್ಥಳೀಯ ನಿವಾಸಿ ಸ್ಥಳೀಯ ಕೆಲವರು ರಾತ್ರಿ ಹೊತ್ತಲ್ಲಿ ಹಳೆಯ ಮನೆಯ ಕಲ್ಲು, ಮಣ್ಣು, ಇಟ್ಟಿಗೆಯ ಪುಡಿ ಸೇರಿ ತ್ಯಾಜ್ಯ ವಸ್ತುಗಳನ್ನು ಕೆರೆ ಪಕ್ಕ ತಂದು ಹಾಕುತ್ತಿರುವುದರಿಂದ ಇಲ್ಲಿನ ವಾತಾವರಣ ಹದಗೆಡುತ್ತಿದೆ. ಪುರಸಭೆಯ ಪೌರಕಾರ್ಮಿಕರಿಂದ ಪಟ್ಟಣದ ಸ್ವಚ್ಛತೆಯ ಕೆಲಸದ ನಡುವೆ ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಒಂದು ವಾರದಲ್ಲಿ ಸಂಪೂರ್ಣವಾಗಿ ಈ ಸ್ಥಳವನ್ನು ಸ್ವಚ್ಛಗೊಳಿಸಲಾಗುವುದು. ಸ್ಥಳೀಯರು ಆರೋಗ್ಯದ ಹಿತದೃಷ್ಟಿಯಿಂದ ಬೇಕಾ ಬಿಟ್ಟಿಯಾಗಿ ಕಸ ಚೆಲ್ಲುವುದನ್ನು ನಿಲ್ಲಿಸಬೇಕು. ಪುರಸಭೆಯ ವಾಹನಗಳಿಗೆ ಕಸವನ್ನು ತಂದು ಹಾಕಬೇಕು. ರಾತ್ರಿ ಸಮಯದಲ್ಲಿ ಕಸ ತಂದು ಹಾಕುವ ವಾಹನಗಳ ಸಂಖ್ಯೆಯನ್ನು ನಾಗರಿಕರು ನೀಡಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ತಿಳಿಸಲಾಗುವುದು. ಎಂ.ಕೆ. ಮುಗಳಿ, ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ