ಜಿಲ್ಲೆ

ಪಾರಿವಾಳಗಳಿಂದ ಅರಮನೆ ಸ್ವಚ್ಛತೆ, ಸೌಂದರ್ಯ ಹಾಳು

ಮೈಸೂರು: ಪಾರಿವಾಳಗಳ ಹಿಕ್ಕೆ ಹಾಗೂ ಅವುಗಳಿಗೆ ಹಾಕುವ ಅತಿಯಾದ ಆಹಾರ ಧಾನ್ಯಗಳಿಂದ ಅರಮನೆಯ ಸ್ವಚ್ಛತೆ ಹಾಗೂ ಸೌಂದರ್ಯ ಹಾಳಾಗುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ತಿಳಿಸಿದರು.


ಈ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಜೈನ್ ಸಂಸ್ಥೆಯ ವತಿಯಿಂದಲೂ ನಿತ್ಯ ಪಾರಿವಾಳಗಳಿಗೆ 2 ಮೂಟೆ ಗೋಧಿ, ಜೋಳ, ಭತ್ತವನ್ನು ನೀಡುತ್ತಿದ್ದು, ಜತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇದರಿಂದ ಪಾರಿವಾಳಗಳು ಅರಮನೆ ಕಟ್ಟಡದ ಮೇಲೆಲ್ಲ ಹಿಕ್ಕೆಗಳನ್ನು ಹಾಕಿ ಅರಮನೆಗೆ ಹಾನಿಯುಂಟು ಮಾಡುತ್ತಿವೆ. ಇದು ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಟ್ಟಡ ತನ್ನ ಸೌಂದರ್ಯವನ್ನು ಕಳೆದುಕೊಳ್ಳಲಿದೆ. ಆದ್ದರಿಂದ ಈಗಲೇ ಅದನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.


ಮೈಸೂರು ಅರಮನೆಯ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿತ್ಯ ಬೆಳಗ್ಗೆ ಮೂಟೆಗಳಲ್ಲಿ ಗೋಧಿ ಕಾಳುಗಳನ್ನು ತಂದು ಸುರಿಯುತ್ತಾರೆ. ಅದನ್ನು ತಿನ್ನಲು ಸಾವಿರಾರು ಪಾರಿವಾಳಗಳು ಅಲ್ಲಿಯೇ ಬೀಡುಬಿಟ್ಟಿವೆ. ಕಾಳು ತಿನ್ನುವ ಸಂದರ್ಭ ಅವುಗಳ ಹಾರುವ ದೃಶ್ಯ ಮನೋಹರವಾಗಿರುತ್ತದೆ. ಅದನ್ನು ಶೂಟ್ ಮಾಡಲು ಛಾಯಾಗ್ರಾಹಕರೂ ಆಗಮಿಸುತ್ತಾರೆ. ಪಾರಿವಾಳಗಳಿಗೆ ಕಾಳು ಹಾಕುವುದನ್ನು ಪಾರಂಪರಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಅಪಾಯಕಾರಿ ಎಂದು ಪರಿಗಣಿಸಿದ್ದಾರೆ. ಆದ್ದರಿಂದ ತಮ್ಮ ಖುಷಿಗಾಗಿ ಪಕ್ಷಿಗಳಿಗೆ ತೊಂದರೆ ನೀಡದಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.


ಅರಮನೆಯ ಅಧಿಕಾರಿಗಳು ಜೈನ್ ಸಂಸ್ಥೆಯೊಂದಿಗೆ ಮಾತನಾಡಿ ಅವಶ್ಯಕತೆ ತಕ್ಕಷ್ಟು ಆಹಾರವನ್ನು ನೀಡುವಂತೆ ಅವರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಹಾಗೂ ಪ್ರವಾಸಿಗರು ನೀಡುವ ಆಹಾರ ಧಾನ್ಯಗಳಿಗೆ ಅನುಗುಣವಾಗಿ ಅವಶ್ಯವಿದ್ದರೆ ಜೈನ್ ಸಂಸ್ಥೆ ಅವರು ಪಾರಿವಾಳ, ಪಕ್ಷಿಗಳಿಗೆ ಆಹಾರ ಧಾನ್ಯಗಳನ್ನು ಒದಗಿಸುವಂತೆ ಸಂಸ್ಥೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.


ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಧಾನ್ಯಗಳನ್ನು ಹಾಕುತ್ತಿರುವುದರಿಂದ ಅರಮನೆಯ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದ್ದು, ಅದರ ಬಗ್ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒಬ್ಬ ಸಹಾಯಕನನ್ನು ನೇಮಿಸಬೇಕು ಎಂದು ತಿಳಿಸಿದರು.


ಒಂದೇ ಕಡೆ ಹೆಚ್ಚು ಆಹಾರ ಧಾನ್ಯ ಹಾಕುವ ಬದಲು ಹಂತ ಹಂತವಾಗಿ ಪಾರಂಪರಿಕ ಕಟ್ಟಡಗಳಿಂದ ದೂರದಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯ ಹಾಕುವುದನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಲಹೆಯನ್ನು ಒಪ್ಪಿದ ಜೈನ್ ಸಂಸ್ಧೆಯವರು ಈ ರೀತಿ ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.


ಈ ಕಾರ್ಯದಲ್ಲಿ ಪಕ್ಷಿಗಳು ಹಾಗೂ ಪಾರಂಪರಿಕ ಕಟ್ಟಡಗಳಿಗೆ ತೊಂದರೆಯಾಗದಂತೆ ನೋಡಿಕೊಂಡು ಎರಡನ್ನೂ ಉಳಿಯುವಂತೆ ನೋಡಿಕೊಳ್ಳಬೇಕು. ಅರಮನೆಯ ಆಡಳಿತ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಅರಮನೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.