ಜಿಲ್ಲೆ

1,790 ಕಿ.ಮೀ ಕ್ರಮಿಸಿ ಮಾಲೀಕನ ಸೇರಿದ ಪಾರಿವಾಳ: ದೆಹಲಿಯಿಂದ ಮಂಡ್ಯಕ್ಕೆ 52 ದಿನ ಹಾರಿದ ಅಭಿಮನ್ಯು

ಮಂಡ್ಯ: ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್‌ನಿಂದ ಆಯೋಜಿಸಿದ್ದ ಡೆಲ್ಲಿ ರೇಸ್‌ನಲ್ಲಿ ಪಾಲ್ಗೊಂಡಿದ್ದ ಮಂಡ್ಯ ತಾಲೂಕು ವಿ.ಸಿ.ಫಾರ್ಮ್‌ನ ಶ್ರೀಧರ್ ಎಂಬುವರು ಸಾಕಿರುವ ಅಭಿಮನ್ಯು ಹೆಸರಿನ ಪಾರಿವಾಳ ಬರೋಬರಿ 52 ದಿನ ಹಾರುವ ಮೂಲಕ 1,790 ಕಿ.ಮೀ ಕ್ರಮಿಸಿ ಮಾಲೀಕನನ್ನು ಸೇರಿಕೊಂಡು ದಾಖಲೆ ಬರೆದಿದೆ.

ಫೆಡರೇಷನ್‌ನಿಂದ ದೆಹಲಿಯಲ್ಲಿ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಭಾಗವಹಿಸುವ ಪಾರಿವಾಳ ಮತ್ತೆ ಮಾಲೀಕನ ಬಳಿಗೆ ಬರಬೇಕು. ಈ ಸ್ಪರ್ಧೆಗೆ ಕರ್ನಾಟಕದಿಂದ 20 ಹಾಗೂ ತಮಿಳುನಾಡಿನಿಂದ 2 ಪಾರಿವಾಳ ಭಾಗವಹಿಸಿದ್ದವು. ಅದರಂತೆ ಶ್ರೀಧರ್ ಸಾಕಿದ್ದ ಪಾರಿವಾಳವೂ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ರೇಸ್‌ಗೂ ಮುನ್ನವೇ ಎಲ್ಲ ಪಾರಿವಾಳಕ್ಕೂ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏ.5ರಂದು ದೆಹಲಿಯಿಂದ ಪಾರಿವಾಳಗಳನ್ನು ಹಾರಿಬಿಡಲಾಗಿತ್ತು. ಈ ರೀತಿ ಹಾರಿ ಬಿಟ್ಟಿದ್ದ ಪಾರಿವಾಳದ ಪೈಕಿ ಕರ್ನಾಟಕದ 14 ವಾಪಸ್ ಬಂದಿವೆ. ಅದರಲ್ಲಿ ಅಭಿಮನ್ಯು ಕೂಡ ಸೇರಿದೆ. ಕೇವಲ ಒಂದು ವರ್ಷದ ಅಭಿಮನ್ಯು 52 ದಿನ ಹಾರಾಟ ನಡೆಸಿ 1,790 ಕಿ.ಮೀ ಕ್ರಮಿಸಿ ಮೇ.25ರಂದು ವಿ.ಸಿ ಫಾರ್ಮ್‌ಗೆ ಬಂದಿದೆ. ಈ ಮೂಲಕ ಪ್ರಥಮ ರೇಸ್‌ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳವೆಂಬ ದಾಖಲೆ ಬರೆದಿದೆ. ರೇಸ್‌ಗೆಂದು ಪಾರಿವಾಳಕ್ಕೆ ಹಲವು ತಿಂಗಳ ತರಬೇತಿ ನೀಡಲಾಗಿದ್ದು, ಸಾವಿರಾರೂ ಕಿ.ಮೀ ದಾಟಿ ವಾಪಸ್ ಬಂದಿರುವುದು ಖುಷಿಯಾಗಿದೆ ಎಂದು ಮಾಲೀಕ ಶ್ರೀಧರ್ ಹೇಳಿಕೊಂಡಿದ್ದಾರೆ.