ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿಸುಬ್ರಹ್ಮಣ್ಯ ಕ್ಷೇತ್ರ ವ್ಯಾಪ್ತಿಯ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂಗೆ ಸೂಕ್ತ ನಿರ್ವಹಣೆ ಕೊರತೆ ಎದುರಾಗಿದೆ..! ಡ್ಯಾಂ ಸುತ್ತಲು ಒತ್ತುವರಿ ಒಂದೆಡೆಯಾದರೆ ಗಿಡ-ಗಂಟೆಗಳು ಬೆಳೆದು ಡ್ಯಾಂನ ರೂಪವೇ ಮರೆಯಾಗಿರುವ ದೃಶ್ಯ ಕಂಡುಬರುತ್ತಿದೆ.
1917 ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಜಾಗದಲ್ಲಿ ಪಿಕಪ್ ಡ್ಯಾಂ ನಿರ್ಮಾಣಕ್ಕೆ ಅಡಿಪಾಯವಾಕಿದ್ದರು. ಎರಡು ಪಂಚಾಯಿತಿ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿಗೆ ನೀರಿಗೆ ಆಸರೆಯಾಗಿರಬೇಕಾದ ಡ್ಯಾಂ ನಿರ್ವಹಣೆ ಬಗ್ಗೆ ನಿರಾಸಕ್ತಿ ಎದುರಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಅಭಿವೃದ್ಧಿಗೆ ಕಾಳಜಿ ಇಲ್ಲ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ, ಇಲ್ಲಿಗೆ ಬಂದವರು ದೇವಸ್ಥಾನದ ಕೂಗಳತೆ ದೂರದಲ್ಲಿರುವ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ವೀಕ್ಷಣೆಗೆ ಬರುವುದು ಸಾಮಾನ್ಯವಾಗಿದೆ, ಇಲ್ಲಿನ ಪ್ರಕೃತಿ ಸೌಂದರ್ಯ, ಜಲರಾಶಿಯ ವೈಭವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಾರೆ, ಆದರೆ ಇಲ್ಲಿ ಪ್ರವಾಸಿತಾಣದ ಅಭಿವೃದ್ಧಿಗೆ ಯಾವೊಂದು ಕೆಲಸವೂ ಆಗಿಲ್ಲ. ಯಾವಾಗಲೂ ಅನುದಾನದ ಕೊರತೆ ಎಂಬ ಸಬೂಬು ಕೇಳಿಬರುತ್ತಲೇ ಇರುತ್ತದೆ, ಇದರಿಂದ ಪ್ರವಾಸೋದ್ಯಮ ಇಲಾಖೆಯೂ ಕೈಕಟ್ಟಿ ಕುಳಿತಿದೆ. ಈ ಬಗ್ಗೆ ಜಿಲ್ಲಾಡಳಿತ ಆಸಕ್ತಿ ತೋರಿಸಿದರೆ ಪ್ರಮುಖ ಪ್ರವಾಸಿ ತಾಣವಾಗಿ ಗಮನ ಸೆಳೆಯಲಿದೆ ಎಂಬುದು ಸ್ಥಳೀಯರು ಆಶಯವಾಗಿದೆ.
ಕಸ-ಕಡ್ಡಿಗಳ ತ್ಯಾಜ್ಯರಾಶಿ: ಕಳೆದ ವರ್ಷ ಹಾಗೂ ಈ ಹಿಂದಿನ ಹಲವು ವರ್ಷಗಳಲ್ಲಿ ಮಳೆಗಾಲದಲ್ಲಿ ಡ್ಯಾಂ ತುಂಬಿ ಹರಿದಿತ್ತು, ಕಳೆದ ವಾರದಿಂದ ಸುರಿದ ಮಳೆಗೆ ಈ ಬಾರಿಯೂ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಡ್ಯಾಂ ವೀಕ್ಷಣೆಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ, ತಿನಿಸುಗಳ ಪ್ಯಾಕೆಟ್ ಸೇರಿ ಇನ್ನಿತರ ತ್ಯಾಜ್ಯವನ್ನು ಡ್ಯಾಂ ಸುತ್ತಮುತ್ತಲ ಪ್ರದೇಶದಲ್ಲೇ ಎಸೆಯುತ್ತಿದ್ದು, ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.
ಔಟ್‌ಪೋಸ್ಟ್ ಸ್ಥಾಪನೆಗೆ ಒತ್ತಾಯ: ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಿವೆ, ಪುಂಡರು ದಂಡು ಕಟ್ಟಿಕೊಂಡು ಮದ್ಯಪಾನ ಸೇರಿ ಇನ್ನಿತರ ಅಕ್ರಮ ಚಟುವಟಿಕೆ ನಡೆಸುತ್ತಾರೆ, ಬೀಡಿ, ಸಿಗರೇಟ್ ಸೇದಿ ಮದ್ಯದ ಬಾಟಲಿಗಳಲ್ಲು ಎಲ್ಲೆಂದರಲ್ಲಿ ಒಡೆದು ಹಾಕುತ್ತಿರುವ ದೃಶ್ಯಗಳು ಕಂಡುಬರುತ್ತಿವೆ, ಈ ಭಾಗದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ನೇಮಕವಿಲ್ಲದೆ ಪುಂಡರನ್ನು ಪ್ರಶ್ನಿಸುವವರು ಇಲ್ಲದಂತಾಗಿದೆ, ಇಲ್ಲಿಗೆ ಬರುವ ಪ್ರವಾಸಿಗರನ್ನು ಸುಲಿಗೆ ಮಾಡುವ ದುಷ್ಕರ್ಮಿಗಳು ಹೆಚ್ಚಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ಇತ್ತೀಚಿಗೆ ನಡೆದ ಪ್ರಕರಣವೊಂದರಲ್ಲಿ ನವವಿವಾಹಿತರನ್ನು ಹೆದರಿಸಿ ಚಿನ್ನಾಭರಣ ದೋಚಿದ್ದ ದುಷ್ಕರ್ಮಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದರು. ಈ ಭಾಗದಲ್ಲಿ ಪೊಲೀಸ್ ಗಸ್ತು ನಿಯೋಜಿಸಬೇಕು, ಪೊಲೀಸ್ ಔಟ್‌ಪೋಸ್ಟ್‌ವೊಂದನ್ನು ಆರಂಭಿಸಿದರೆ ಒಳಿತು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಅಕ್ರಮ ಮರಳು ಸಾಗಣೆ: ಡ್ಯಾಂನ ಒಡಲಿನಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ, ಡ್ಯಾಂನಲ್ಲಿ ನೀರು ಬರಿದಾಗುತ್ತಿದ್ದಂತೆ ಮರಳು ದಂಧೆ ಆರಂಭವಾಗುತ್ತದೆ ಎಂಬ ಆರೋಪ ಸಾಮಾನ್ಯವಾಗಿದೆ, ಕೆಲವು ವರ್ಷದ ಹಿಂದೆ ಮರಳುಗಾರಿಕೆಗಾಗಿಯೇ ಡ್ಯಾಂನಲ್ಲಿನ ನೀರು ಹರಿದು ಹೋಗುವ ಕೃತ್ಯ ಎಸಗಲಾಗಿತ್ತು ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು. ರೈತರ ಕೃಷಿ ಚಟುವಟಿಕೆಗಳಿಗೆ ಇಲ್ಲಿನ ನೀರು ಸದ್ಭಳಕೆಯಾಗುವಂತೆ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕು ಎಂಬುದು ಈ ವ್ಯಾಪ್ತಿಯ ರೈತರ ಮನವಿಯಾಗಿದೆ. ಇಲ್ಲಿಂದ ದೊಡ್ಡಬಳ್ಳಾಪುರ ನಗರಕ್ಕೆ ಕುಡಿವ ನೀರು ಒದಗಿಸುವ ಯೋಜನೆ ರೂಪಿಸುವ ಬಗ್ಗೆಯೂ ಸುದ್ದಿ ಹರಿದಾಡಿತ್ತು. ಡ್ಯಾಂ ಸುತ್ತಲೂ ಉದ್ಯಾನ ನಿರ್ಮಾಣದ ಯೋಜನೆಯ ಬಗ್ಗೆ ಮಾತುಗಳೂ ಕೇಳಿಬಂದಿದ್ದವು. ಡ್ಯಾಂನಲ್ಲಿ ಮತ್ತಷ್ಟು ನೀರು ಸಂಗ್ರಹವಾಗುವ ಯೋಜನೆ ರೂಪಿಸುವುದು ಡ್ಯಾಂ ಸುತ್ತಲು ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸುವುದು ಸೇರಿ ಮತ್ತಷ್ಟು ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಆಶ್ವಾಸನೆ ನೀಡಿದ್ದರು ಹೊರತು ಯಾವುದೂ ಕಾರ್ಯಗತವಾಗಲಿಲ್ಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ತಾಲೂಕಿಗೆ ಗ್ರಾಮಾಂತರ ಜಿಲ್ಲೆಗೇ ಹೆಮ್ಮೆಯಾಗಿದೆ, ಹಲವು ಹಳ್ಳಿಗಳ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದೆ, ಇದರ ನಿರ್ವಹಣೆಗೆ ಜಿಲ್ಲಾಡಳಿತ ಹೆಚ್ಚಿನ ಗಮನ ನೀಡಬೇಕು, ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು, ಪ್ರವಾಸಿಗರಿಗೆ ಭದ್ರತೆ ಒದಗಿಸುವ ದೃಷ್ಟಿಯಲ್ಲಿ ಕ್ರಮಕೈಗೊಳ್ಳಬೇಕು, ನಿರ್ವಹಣೆ ಬಗ್ಗೆ ಗಮನ ನೀಡಬೇಕು.
ಸಿದ್ದಪ್ಪ, ಹಾಡೋನಹಳ್ಳಿ ನಿವಾಸಿ