ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಪ್ರಾಥಮಿಕ ಸಹಾಕರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ತಾಲೂಕಿನ ವಿವಿಧ ಕ್ಷೇತ್ರಗಳಿಂದ ಸಾಕಷ್ಟು ಷೇರುದಾರರು ಅಂತಿಮ ದಿನವಾದ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 534 ಷೇರುದಾರರಿದ್ದು, ಒಟ್ಟು 14 ನಿರ್ದೇಶಕರ ಸ್ಥಾನಗಳಿವೆ. ಆದರೆ ಈ ಪೈಕಿ ಸಾಲ ಪಡೆಯದವರ ಕ್ಷೇತ್ರದ 1 ಸ್ಥಾನ ಎಸ್.ಟಿ.ಪಂಗಡಕ್ಕೆ ಮೀಸಲಿದ್ದು, ಪ್ರಸ್ತುತ ಬ್ಯಾಂಕ್‌ನಲ್ಲಿ ಆ ಸಮುದಾಯದ ಷೇರುದಾರರಿದ ಕಾರಣ 13 ನಿರ್ದೇಶಕರ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿದೆ.
ಸಾಲ ಪಡೆಯದವರ ಹಾಗೂ ಸಾಲ ಪಡೆದವರ ಕ್ಷೇತ್ರಗಳಾದ ಅರಕೆರೆ ಹೋಬಳಿಯ-1,2,3, ಕೆ.ಶೆಟ್ಟಹಳ್ಳಿ ಹೋಬಳಿಯ- 1,2,3, ಕಸಬಾ ಹೋಬಳಿ-1,2,3 ಹಾಗೂ ಬೆಳಗೊಳ ಹೋಬಳಿ- 1,2,3 ರಿಂದ ಒಟ್ಟು 32 ಷೇರುದಾರರು ನಾಮಪತ್ರ ಸಲ್ಲಿಸಿದ್ದು, ಅಂತಿಮ ದಿನದಂದು 18 ನಾಮಪತ್ರ ಸಲ್ಲಿಕೆಯಾಗಿವೆ.
ಜ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 19ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. 25ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಷೇರುದಾರರು ಕಡ್ಡಾಯವಾಗಿ ಗುರುತಿನ ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ.