ಜಿಲ್ಲೆ

ಆ.1-2ರಂದು ಫಿಸಿಯೋಸಿಮ್ಕಾನ್-2022 ಅಂತಾರಾಷ್ಟ್ರೀಯ ಸಮಾವೇಶ

reportermng

ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಪಿ ವಿಭಾಗದ ವತಿಯಿಂದ ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಸ್ಕಿಲ್ ಸೆಂಟರ್ ಸಹಯೋಗದಲ್ಲಿ ಆ.2 ಮತ್ತು 3ರಂದು ಸಂಸ್ಥೆಯ ದಶಮಾನೋತ್ಸವ ಸಭಾಂಗಣದಲ್ಲಿ ಫಿಸಿಯೋಸಿಮ್ಕಾನ್ -2022 ಅಂತಾರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ.
ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸೋಮವಾರ ಸಮಾವೇಶದ ಮಾಹಿತಿ ಕೈಪಿಡಿ ವೀಡಿಯೋ ಬಿಡುಗಡೆಗೊಳಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಸಿಮ್ಯುಲೇಶನ್ ಫಿಸಿಯೋಥೆರಪಿ ಕುರಿತ ಸಮಾವೇಶ ನಡೆಯುತ್ತಿದೆ. ಫಿಸಿಯೋಥೆರಪಿ ಕ್ಷೇತ್ರದ ವೈದ್ಯರಿಗೆ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ, ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಉತ್ತಮ ಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ದೇಶದ ವಿದೇಶಗಳ ಸುಮಾರು 200 ಮಂದಿ ಎರಡು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಫಿಸಿಯೋಥೆರಪಿ ವಿಭಾಗದ ಡೀನ್ ಪ್ರೊ.ಚೆರಿಷ್ಮಾ ಡಿಸಿಲ್ವ ಮಾತನಾಡಿ, ಆ.2ರಂದು ಬೆಳಗ್ಗೆ 9.30ಕ್ಕೆ ಭಾರತೀಯ ಫಿಸಿಯೋಥೆರಪಿ ಅಸೋಸಿಯೇಶನ್ ಅಧ್ಯಕ್ಷ ಡಾ. ಸಂಜೀವ್ ಝಾ ಸಮಾವೇಶ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಅಸೋಸಿಯೇಶನ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಅಲಿ, ಯುನೈಟೆಡ್ ಕಿಂಗ್‌ಡಮ್‌ನ ಸೌತ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಫಿಸಿಯೋಥರಪಿ ವಿಭಾಗ ಪ್ರಾಧ್ಯಾಪಕಿ ಡಾ.ಡೆಬ್ಬಿ ಥ್ಯಾಕ್ರೆ ಉಪಸ್ಥಿತರಿರುವರು. ಎರಡು ದಿನಗಳ ಸಮಾವೇಶದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳು, ವಿವಿಧ ಲೈವ್ ಸಿಮ್ಯುಲೇಶನ್ ಡ್ರಿಲ್‌ಗಳು ನಡೆಯಲಿವೆ. ಕ್ರಿಟಿಕಲ್ ಕೇರ್ ಫಿಸಿಯೋಥೆರಪಿ ಮತ್ತು ಸಿಮ್ಯಲೇಶನ್‌ಗೆ ಸಂಬಂಧಿಸಿದ ರಸಪ್ರಶ್ನೆ ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ನಗದು ಬಹುಮಾನವಿದೆ ಎಂದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ.ಅಜಿತ್ ಬಿ.ಮಿನೇಜಸ್, ಡೀನ್ ಡಾ.ಆಂಟನಿ ಸಿಲ್ವನ್ ಡಿಸೋಜ, ಸಿಮ್ಯಲೇಶನ್ ವಿಭಾಗದ ಪ್ರಾಧ್ಯಾಪಕ ಡಾ.ರಿತೇಶ್ ಡಿಕುನ್ಹ ಮೊದಲಾದವರಿದ್ದರು.