ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳು ಬಾದಾಮಿ ಬೆಟ್ಟಕ್ಕೆ ಚಾರಣ ಕೈಗೊಂಡಿದ್ದರು. ಪ್ರಾಂಶುಪಾಲ ಡಾ. ಅರುಣಕುಮಾರ ಗಾಳಿ, ಡಾ. ಚಂದ್ರಶೇಖರ ಕಾಳನ್ನವರ, ಪ್ರೊ.ಪರಸಪ್ಪ ತಳವಾರ ಮತ್ತಿತರರರಿದ್ದಾರೆ.  
ಜಿಲ್ಲೆ

ಚಾರಣದಿಂದ ಭೌತಿಕ ಸಾಮರ್ಥ್ಯ ವೃದ್ಧಿ

ವಿನಯ ಆಶೋಕ ನಾಯ್ಕ

ಬಾದಾಮಿ: ವಿದ್ಯಾರ್ಥಿಗಳು ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಚಾರಣ ಮಾಡುವುದರಿಂದ ಬೌದ್ಧಿಕ ಮತ್ತು ಭೌತಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅರುಣಕುಮಾರ ಗಾಳಿ ಹೇಳಿದರು.

ಬಾದಾಮಿ ಬೆಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳ ಚಾರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸುತ್ತಲಿನ ಪರಿಸರದ ಬಗ್ಗೆ ತಿಳಿದುಕೊಂಡು ಅವುಗಳ ರಕ್ಷಣೆಗೆ ಮುಂದಾಗಬೇಕು. ಕನ್ನಡ ನಾಡಿನ ಪ್ರಾಚೀನ ಸಂಸ್ಕೃತಿ, ಪರಂಪರೆಯನ್ನು ಚಾಲುಕ್ಯರ ವಾಸ್ತು ಶಿಲ್ಪ ಕಲೆಗಳ ಮೂಲಕ ತಿಳಿದುಕೊಳ್ಳಬೇಕು ಎಂದರು.

ರೋವರ್ಸ್ ಲೀಡರ್ ಡಾ. ಚಂದ್ರಶೇಖರ ಕಾಳನ್ನವರ ಮಾತನಾಡಿ, ನಮ್ಮ ವಾತಾಪಿ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ಬಂಡೆಗಲ್ಲಿನಲ್ಲಿ ಕೊರೆದಿರುವ ವಾಸ್ತುಶಿಲ್ಪ ಕಲೆಗಳು ಚಾಲುಕ್ಯರ ಕಾಲದ ಸಂಸ್ಕೃತಿಯ ವಿಶೇಷತೆ ತಿಳಿಸುತ್ತವೆ ಎಂದರು.

ರೋವರ್ ಲೀಡರ್ ಪ್ರೊ.ಪರಸಪ್ಪ ತಳವಾರ ಮಾತನಾಡಿ, ನಮ್ಮ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಬೇಸಿಗೆ ಶಿಬಿರದ ಬಾದಾಮಿ ಬೆಟ್ಟದ ಚಾರಣದ ಅನುಭವಗಳು ನಮ್ಮ ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿ ತುಂಬಿವೆ ಎಂದರು.

ರೋವರ್ ಲೀಡರ್ ಡಾ.ಸುಮಂಗಲಾ ಮೇಟಿ ಶಿಬಿರಾರ್ಥಿಗಳಿಗೆ ಕಪ್ಪೆ ಆರ್ಯಭಟ ಶಾಸನದ ಮಹತ್ವ, ತ್ರಿಪದಿ ಕುರಿತು ಮಾಹಿತಿ ನೀಡಿದರು.

ಬಾದಾಮಿ ಡಿಪೋ ಮೇಲಧಿಕಾರಿ ಎ.ಎ. ಕೋರಿ ಅವರು ಶಿಬಿರಾರ್ಥಿಗಳಿಗೆ ಬಾದಾಮಿ ಬಸ್ ನಿಲ್ದಾಣದಿಂದ ಮರಳಿ ಬಾಗಲಕೋಟೆಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದರು. ಚಾರಣದಲ್ಲಿ 60 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.