ಜಿಲ್ಲೆ

ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಂಬಡ್ತಿ ನೀಡಿ

ಲಿಂಗಸುಗೂರು: ದೈಹಿಕ ಶಿಕ್ಷಣ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಬಿಇಒ ಹುಂಬಣ್ಣ ರಾಠೋಡ್‌ಗೆ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಗಂಗಮ್ಮ ಕಟ್ಟಮನಿ ನೇತೃತ್ವದಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಬೇಕು. ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.

ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಚಾರ್ಯರ ಖಾಲಿ ಹುದ್ದೆಗಳನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಅವಕಾಶ ನೀಡಬೇಕು. ಎಸ್‌ಎಟಿಎಸ್‌ನಲ್ಲಿ ದೈಹಿಕ ಶಿಕ್ಷಣವನ್ನು ಭಾಗ ಎ ನಲ್ಲಿ ಸೇರ್ಪಡೆ ಮಾಡದಿರುವುದರಿಂದ ಗೊಂದಲಗಳಿಗೆ ಕಾರಣವಾಗಿದ್ದು, ಈ ಎಲ್ಲ ಬೇಡಿಕೆಗಳನ್ನು ಜುಲೈನೊಳಗೆ ಬಗೆಹರಿಸಬೇಕು. ಇಲ್ಲವಾದರೆ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.