ಮಳವಳ್ಳಿ: ಮಹಿಳೆಯರು ಹಾಗೂ ಶೋಷಿತ ಸಮುದಾಯಗಳಿಗೆ ಶಿಕ್ಷಣವೆಂಬುದು ನಿಷೇಧವಾಗಿದ್ದ ಕಾಲಘಟ್ಟದಲ್ಲಿ ಪುರೋಹಿತಶಾಹಿಗಳ ವಿರೋಧದ ನಡುವೆಯೂ ಶಾಲೆಗಳನ್ನು ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲ್ಪಿಸಿದ ಸಾವಿತ್ರಿ ಬಾಯಿ ಫುಲೆ ಅವರು ಸದಾ ಸ್ಮರಣೀಯರು ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ದೇವಿ ತಿಳಿಸಿದರು.
ತಾಲೂಕಿನ ತಳಗವಾದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನಾ ಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದಂತೆ ತಡೆಯಲು ಪಟ್ಟಭದ್ರರು ಸಾಕಷ್ಟು ದೌರ್ಜನ್ಯ ನಡೆಸಿದರೂ ಅದೆಲ್ಲವನ್ನೂ ಸಹಿಸಿಕೊಂಡು ತಮ್ಮ ಪತಿ ಜ್ಯೋತಿಬಾಯಿ ಫುಲೆ ಅವರ ಬೆಂಬಲದೊಂದಿಗೆ ಅಕ್ಷರ ಕ್ರಾಂತಿಯನ್ನೇ ಸೃಷ್ಟಿಸಿದವರು ಸಾವಿತ್ರಿ ಬಾಯಿ ಫುಲೆ. ಇಂದಿನ ಮಹಿಳೆಯರಿಗೆ ಅವರು ಸದಾ ಸ್ಫೂರ್ತಿದಾಯಕರಾಗಿದ್ದಾರೆ ಎಂದರು.
ಪ್ರಸ್ತುತ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ಸರ್ಕಾರದ ಶಾಸಕರು, ಮಂತ್ರಿಗಳೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಜನರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹ ಬೆಳೆಸಿ ಸರ್ಕಾರಿ ಶಾಲೆಗಳು ಮುಚ್ಚುವಂತೆ ಮಾಡುತ್ತಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷೆ ಮಂಜುಳಾ, ಮುಖ್ಯಸ್ಥೆ ಪ್ರೇಮಕುಮಾರಿ, ಶಿಕ್ಷಕರಾದ ನಾಗರಾಜು, ನಿರಂಜನ್ ಸೇರಿದಂತೆ ಹಲವು ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.