ಜಿಲ್ಲೆ

ಜನರ ಸಾಕ್ಷರತೆಗೆ ದುಡಿದ ಫುಲೆ ದಂಪತಿ

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಭಾರತದ ಪ್ರಗತಿಗೆ ಕಾರಣವಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಮೀರಿ ಜನರ ಸಾಕ್ಷರತೆಗೆ ದುಡಿದ ಅವರ ವ್ಯಕ್ತಿತ್ವ ಸ್ಮರಣೀಯ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಶ್ವಜ್ಞಾನಿ ಬಿ.ಆರ್.ಅಂಬೇಡ್ಕರ್ ಜನಸೇವಾ ಪ್ರತಿಷ್ಠಾನದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಸಾವಿತ್ರಿಬಾಯಿ ಫುಲೆ’ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫುಲೆ ದಂಪತಿ ಅನಕ್ಷರಸ್ಥರ ಹೃದಯದಲ್ಲಿ ಶಿಕ್ಷಣದ ಬೀಜ ಬಿತ್ತಿದರು. ಹಲವು ಸಂಕಷ್ಟಗಳನ್ನು ಎದುರಿಸಿ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ರಾಜ್ಯದಲ್ಲಿಯೂ ಅವರನ್ನು ಸ್ಮರಿಸುವ ಶಾಶ್ವತ ಕೆಲಸ ಸರ್ಕಾರದಿಂದಾಗಬೇಕು. ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಅವರ ಹೆಸರನ್ನು ಮುನ್ನೆಲೆಗೆ ತರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಭಾರತದಲ್ಲಿ ಜಾತಿ, ಲಿಂಗ ಆಧಾರಿತವಾಗಿ ಶಿಕ್ಷಣ ದೊರೆಯುತ್ತಿದ್ದ ರೀತಿಯನ್ನು ಪ್ರಶ್ನಿಸಿದ ಮಹಾನ್ ಚೇತನರಿವರು. ಇಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಮರು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಶಿಕ್ಷಕಿಯರಾದ ಎಂ.ಎನ್.ಯಶೋದಾ ಮತ್ತು ಎಂ.ಜಿ.ಸುಗುಣಾವತಿ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಆನಂದ್, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರತಿಷ್ಠಾನದ ಅಧ್ಯಕ್ಷ ಕೆ.ಮಹೇಶ್ ಇದ್ದರು.