ಮೈಸೂರು: ಯಾವುದೇ ಒಂದು ಘಟನೆಯನ್ನು ಸೆರೆ ಹಿಡಿದು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವ ಛಾಯಾಗ್ರಹಣ ಕೂಡ ಒಂದು ಕಲೆ ಎಂದು ಯೂತ್ ಫೋಟೋಗ್ರಾಫಿಕ್ ಸೊಸೈಟಿ ಅಧ್ಯಕ್ಷ ವಿಕಾಶ್ ಶಾಸ್ತ್ರೀ ಅಭಿಪ್ರಾಯಪಟ್ಟರು.
ಯೂತ್ ಫೋಟೋಗ್ರಾಫಿಕ್ ಸೊಸೈಟಿ, ಫೆಡರೇಷನ್ ಆಫ್ ಇಂಡಿಯನ್ ಫೋಟೊಗ್ರಫಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ 31ನೇ ಎಫ್‌ಐಸಿ ‘ಗಜರಾಜ-2024’ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಛಾಯಾಗ್ರಹಣವನ್ನು ಲಲಿತಕಲೆಯಾಗಿ ಯೋಚಿಸುವುದರಿಂದ ದೃಷ್ಟಿಗೋಚರ ಸೃಜನಶೀಲತೆ, ಸಾಕ್ಷ್ಯಚಿತ್ರ ಕೌಶಲಗಳು, ಸಾಕ್ಷರತೆ ಮತ್ತು ಬರವಣಿಗೆಯ ಅಭಿವೃದ್ಧಿ, ಯುವ ಸಬಲೀಕರಣ, ಸಾಮಾಜಿಕ ಸಮರ್ಥನೆ ಮತ್ತು ನೀತಿ ಬದಲಾವಣೆಯ ಸಾಧನವಾಗಿ ಮಾನಸಿಕ ಬದಲಾವಣೆಯನ್ನು ಮಾಡಲು ಅದ್ಭುತ ಅವಕಾಶವನ್ನು ಒದಗಿಸುತ್ತದೆ ಎಂದರು.
ಛಾಯಾಚಿತ್ರಗಳು ಸಂತೋಷ, ದುಃಖ ಸೇರಿದಂತೆ ಎಲ್ಲ ಘಟನೆಗಳನ್ನು ಸೆರೆ ಹಿಡಿಯುವ ಮೂಲಕ ಅದು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದೆ. ಇಂತಹ ಕಾರ್ಯಾಗಾರಗಳು ಕಿರಿಯ ಸದಸ್ಯರಿಗೆ ಉತ್ತಮ ಚಿತ್ರಗಳನ್ನು ಮಾಡಲು ಮೊದಲ ಅವಕಾಶವನ್ನು ಪಡೆಯಲು ಮಾರ್ಗದರ್ಶನ ನೀಡುವಲ್ಲಿ ಸಹಾಯಕವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉನ್ನತ ದರ್ಜೆಯ ಛಾಯಾಗ್ರಾಹಕರೊಂದಿಗೆ ಸಂವಹನ ನಡೆಸುವ ಮೂಲಕ ಮತ್ತು ಕೆಲಸ ಮಾಡುವ ಮೂಲಕ ಯೂತ್ ಫೊಟೋಗ್ರಾಫಿಕ್ ಸೊಸೈಟಿಯಲ್ಲಿ ಪ್ರತಿಯೊಬ್ಬ ಸದಸ್ಯರು ಕಲಿಕೆಯ ಭರವಸೆಯನ್ನು ಹೊಂದಿದ್ದಾರೆ. ಯೂತ್ ಫೊಟೊಗ್ರಾಫ್ ಸೊಸೈಟಿಯು ಪ್ರಸ್ತುತ 381ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಉತ್ತಮವಾಗಿ ಬೆಳೆಯುತ್ತಿದೆ. ನೇಚರ್, ಪಿಕ್ಟೋರಿಯಲ್ ಮತ್ತು ಟ್ರಾವೆಲ್ ಫೋಟೋಗ್ರಫಿಗಾಗಿ ಕಾರ್ಯಾಗಾರಗಳು ಮತ್ತು ಪ್ರವಾಸಗಳನ್ನು ಆಗಾಗ್ಗೆ ಅಯೋಜನೆ ಮಾಡಲಾಗುತ್ತಿದ್ದೇವೆ ಎಂದರು.
ಪತ್ರಕರ್ತ ಎಸ್.ಟಿ.ರವಿಕುಮಾರ್ ಮಾತನಾಡಿ, ಛಾಯಾಗ್ರಹಣವನ್ನು ಕಲಿಯುವುದು ಯುವಕರಿಗೆ ಕಲಾತ್ಮಕ ಮತ್ತು ತಾಂತ್ರಿಕ ಕೌಶಲಗಳ ಅಪರೂಪದ ಮಿಶ್ರಣವನ್ನು ಒದಗಿಸುತ್ತದೆ. ನಮ್ಮ ಸಾಂಸ್ಕೃತಿಕ ನಗರಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ರಾಜವಂಶಸ್ಥರು ನೀಡಿರುವ ಕೊಡುಗೆಯನ್ನು ಎಲ್ಲೆಡೆ ಪಸರಿಸಿದ್ದಾರೆ. ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ಫೋಟೋಗ್ರಫಿ ಆಯೋಜನೆ ಮಾಡಿರುವುದರ ಜತೆಗೆ ಈ ವೃತ್ತಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಹೇಳಿದರು.
ಖ್ಯಾತ ವಜ್ಯಜೀವಿ ಛಾಯಾಗ್ರಾಹಕ ಕೃಪಾಕರ ಸಮಾವೇಶಕ್ಕೆ ಚಾಲನೆ ನೀಡಿದರು. ಸಂಘಟಕರಾದ ಮಿರನಲ್ ಸೇನಾ, ಸುಧಿರ್ ಸೆಕ್ಸೆನಾ, ಬರೂಣ ಸೇನಾ, ಸಿ ಆರ್ ಸತ್ಯನಾರಾಯಣ್, ಪ್ರೇಮಾ ಇತರರು ಇದ್ದರು.