ಜಿಲ್ಲೆ

ಕೋಡಿಕಲ್ ಕ್ರಾಸ್ ಕಾರು ಕಾಲುವೆಗೆ ಉರುಳಿ ಛಾಯಾಚಿತ್ರಗ್ರಾಹಕ ಮೃತ್ಯು

ಮಂಗಳೂರು:ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಕೋಡಿಕಲ್ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ಕಾರೊಂದು ರಾಜ ಕಾಲುವೆಗೆ ಉರುಳಿ ಬಿದ್ದು ಛಾಯಾಚಿತ್ರಗ್ರಾಹಕರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ಸೂರ್ಯನಾರಾಯಣ(48) ಮೃತಪಟ್ಟವರು.

ಪಣಂಬೂರು ನಂದಿಕೇಶ್ವರ ದೇವಾಲಯದಲ್ಲಿ ಕಾರ್ಯಕ್ರಮವೊಂದರ ಫೋಟೋ ತೆಗೆಯಲು ವಹಿಸಿಕೊಂಡಿದ್ದು, ಬೆಳಗ್ಗೆ ಕಾರಿನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದೆ. ಕಾರು ನಿಯಂತ್ರಣ ತಪ್ಪಿ ಕೊಳಚೆ ನೀರು ಹರಿಯುವ ಕಾಲುವೆಗೆ ಉರುಳಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಸೂರ್ಯನಾರಾಯಣ ಅವರನ್ನು ರಕ್ಷಿಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ. ಉಡುಪಿಯ ಕಿದಿಯೂರಿನ ಲ್ಯಾಬೊಂದರಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಉಪ್ಪಳದಲ್ಲಿ ಸ್ವಂತ ಫೋಟೋ ಸ್ಟುಡಿಯೋ ತೆರೆದಿದ್ದರು. ಸರಳ ಹಾಗೂ ಸಾಧು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಅವರು ಸ್ನೇಹಿತ ವಲಯದಲ್ಲಿ ‘ವರ್ ಸೂರ್ಯ’ ಎಂದು ಕರೆಯಲ್ಪಡುತ್ತಿದ್ದರು. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ದಂಡೆ ಇಲ್ಲದ ಕಾಲುವೆಗೆ ಇನ್ನೆಷ್ಟು ಬಲಿ?: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರವಾಗಿ ವಾಹನಗಳು ಸಾಗುವ ರಸ್ತೆ ಬದಿ ದಂಡೆ ಇಲ್ಲದ ಹಲವಾರು ರಸ್ತೆಗಳಿವೆ. ಕೊಟ್ಟಾರದಲ್ಲಿ ಕಳೆದ ವರ್ಷ ಆಟೋ ರಿಕ್ಷಾ ಚಾಲಕರೊಬ್ಬರು ಕಾಲುವೆಗೆ ಬಿದ್ದು ಮೃತಪಟ್ಟಿದ್ದರು. ಈ ಬಾರಿ ಕಾರು ಉರುಳಿ ಜೀವ ಬಲಿಯಾಗಿದೆ. ಮಳೆ ಬಂದಾಗ ರಸ್ತೆಗೆ ಸಮನಾಗಿ ನೀರು ಹರಿದರೆ ರಸ್ತೆಯ ಅಂಚು ಗಮನಕ್ಕೆ ಬರುವುದಿಲ್ಲ. ಇದಕ್ಕೆ ತಡೆಗೋಡೆ ರಚಿಸುವಂತೆ ನಿರಂತರವಾಗಿ ಆಗ್ರಹ ವ್ಯಕ್ತವಾಗುತ್ತಿದ್ದರೂ ಪಾಲಿಕೆ ಮಾತ್ರ ಮೌನ ವಹಿಸಿದೆ.