ಜಿಲ್ಲೆ

12ರಿಂದ ಛಾಯಾಚಿತ್ರ ಪ್ರದರ್ಶನ, ವಿಚಾರ ಸಂಕಿರಣ

reportermys

ಮೈಸೂರು: ಕೇಂದ್ರ ಸರ್ಕಾರದ 8 ವರ್ಷಗಳ ಸಾಧನೆ ಮತ್ತು ಪ್ರಧಾನಮಂತ್ರಿಗಳ ವಿಷನ್- 2047 ಹಾಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಛಾಯಾಚಿತ್ರ ಪ್ರದರ್ಶನ ಹಾಗೂ ವಿಚಾರಸಂಕಿರಣವನ್ನು ನಗರದಲ್ಲಿ ಅ. 12ರಿಂದ 18ರವರೆಗೆ ಆಯೋಜಿಸಲಾಗಿದೆ.


ಸರ್ಕಾರಿ ಮಹಾರಾಜ ಪದವಿ ಪೂರ್ವ ಕಾಲೇಜು ಆವರಣದಲ್ಲಿ 7 ದಿನಗಳು ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಂವಹನ ಇಲಾಖೆ ಉಪನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಆಯುಷ್ಮಾನ್ ಭಾರತ, ಆರೋಗ್ಯ ರಕ್ಷಣೆ ಮತ್ತು ಸಾಂಕ್ರಾಮಿಕ ರೋಗ ನಿರ್ವಹಣೆ, ಸಶಕ್ತ ರೈತ ಸಮೃದ್ಧ ಭಾರತ, ಆದಿವಾಸಿಗಳ ಸರ್ವತೋಮುಖ ಅಭಿವೃದ್ಧಿಯ ಖಾತ್ರಿ, ಹರ್ ಘರ್ ಜಲ್, ರಾಷ್ಟ್ರೀಯ ಶಿಕ್ಷಣ ನೀತಿ 2020, ದಿವ್ಯಾಂಗರ ಸಬಲೀಕರಣ, ಸಂಪರ್ಕಿತ ಭಾರತ ನಿರ್ಮಾಣ ಮುಂತಾದ ಯೋಜನೆಗಳ ಛಾಯಾಚಿತ್ರ ಪ್ರದರ್ಶನ ನಾಲ್ಕು ಮಳಿಗೆಗಳಲ್ಲಿ ಇರಲಿವೆ ಎಂದು ಹೇಳಿದರು.

ಭಾರತ ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ದೇಶದ ಪ್ರಗತಿಯನ್ನು ದೂರದರ್ಶಿತ್ವದಿಂದ ಮನಗಂಡಿರುವ ಪ್ರಧಾನಿ ನರೇಂದ್ರಮೋದಿ ಅವರ ಪಂಚ ಸಂಕಲ್ಪದ ಪರಿಚಯವನ್ನು ಈ ಪ್ರದರ್ಶನ ಮಾಡಿಕೊಡಲಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕನ್ನಡ ನಾಡಿನ ವೀರ ಮಹನೀಯರನ್ನು ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ಮರಿಸುವ ಜತೆಗೆ, ಹೋರಾಟದ ವೀರಗಾಥೆ ಮತ್ತು ಹೆಜ್ಜೆ ಗುರುತುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.


ಜತೆಗೆ, 7 ದಿನವೂ ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ಸಂವಹನ ದೋಷವುಳ್ಳವರ ಅನುಕೂಲಕ್ಕಾಗಿ ಮಾಹಿತಿ ನೀಡುವ ಉಪನ್ಯಾಸವನ್ನು ಆಯುಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ, ಆರೋಗ್ಯ ಕಾರ್ಡ್, ಕ್ಷಯಮುಕ್ತ ಭಾರತದ ವಿಷಯ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ರಾಜೇಶ್ವರಿ, ಆರ್ಥಿಕ ಯೋಜನೆಗಳ ಕುರಿತು ರುಡ್‌ಸೆಟ್ ನಿರ್ದೇಶಕ ಆನಂದ ನಾಯಕ್, ಲೀಡ್ ಬ್ಯಾಂಕ್ ಅಧಿಕಾರಿ ಪಿ.ದಿನೇಶ್, ದೇಶವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಏಕ ಭಾರತ ಶ್ರೇಷ್ಠ ಭಾರತ ಕುರಿತು ನೃತ್ಯಪಟು ಡಾ.ಶಾಂಭವಿ ಸ್ವಾಮಿ, ಯುವ ಜನತೆ ಹಾಗೂ ಕೌಶಲ ವರ್ಧನೆ ಬಗ್ಗೆ ಭೀಮರಾಜು, ರಾಷ್ಟ್ರಭಿಮಾನದ ಪ್ರೇರಕ ಶಕ್ತಿಯಾದ ತ್ರಿವರ್ಣಧ್ವಜ ಮತ್ತು ದೇಶಪ್ರೇಮ ಕುರಿತು ಭಾರತ ಸೇವಾದಳದ ಡಿ.ಆರ್.ಶೇಷಾಚಲ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.


ಆರೋಗ್ಯ ಸಂಬಂಧಿತ ಕಾರ್ಡ್‌ಗಳ ನೋಂದಣಿ, ಸಂವಹನ ದೋಷವುಳ್ಳವರಿಗೆ ತಪಾಸಣೆ, ಉಚಿತ ಕೋವಿಡ್ ಲಸಿಕೆ, ಆರೋಗ್ಯ ತಪಾಸಣೆ, ರಕ್ತನಿಧಿ ಸಂಗ್ರಹ, ಕೃತಕ ಕೈಕಾಲು ಜೋಡಣೆ, ಸಿರಿಧಾನ್ಯಗಳ ಪರಿಚಯಿಸುವ ಮಳಿಗೆಗಳಲ್ಲಿ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಾಗುತ್ತದೆ ಎಂದರು.


ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಸ್ಪರ್ಧೆಗಳು, ಕೇಂದ್ರ ಸರ್ಕಾರದ ನಾಟಕ ಮತ್ತು ಸಂಗೀತ ವಿಭಾಗದ ಕಲಾತಂಡ ಮತ್ತು ಸ್ಥಳೀಯ ನುರಿತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಗಪಟು ಎಚ್.ಖುಷಿ ಆರ್ಟಿಸ್ಟಿಕ್ ಯೋಗ ಪ್ರದರ್ಶಿಸಲಿದ್ದಾರೆ. ಜಿಎಸ್‌ಎಸ್ ತಂಡದಿಂದ ಸಾಮೂಹಿಕ ಯೋಗ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಅ.12ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಮೇಯರ್ ಶಿವಕುಮಾರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಪ್ರಚಾರ ಅಧಿಕಾರಿಗಳಾದ ತುಕಾರಾಮ್‌ಗೌಡ, ರಾಮಕೃಷ್ಣಪ್ಪ ಹಾಗೂ ವಾರ್ತಾ ಸಹಾಯಕ ರಮೇಶ್ ಇದ್ದರು.