ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ, ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಮಂಗಳವಾರ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಅಂಗವಾಗಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆಎಲ್‌ಇ ಜವಾಹರಲಾಲ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕುಮಾರ ವಿಂಚುರಕರ್ ಭಾಗವಹಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತ ಜನಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಷ ಅ. 1ರಿಂದ ಅ.21ರವರೆಗೆ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಮಾಡಲಾಗುತ್ತದೆ. ಈಚಿನ ದಿನಗಳಲ್ಲಿ ಹೆಚ್ಚು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಇದು ಸ್ತನಗಳ ಜೀವಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್ ಆಗಿದೆ ಎಂದು ವಿವರಿಸಿದರು.
ಸ್ತನ ಕ್ಯಾನ್ಸರ್ ಲಕ್ಷಣಗಳು, ಮಹಿಳೆಯರು ಸ್ತನಗಳ ಪರೀಕ್ಷೆ ಯಾವ ರೀತಿ ಮಾಡಿಕೊಳ್ಳಬೇಕು, ಮಹಿಳೆಯರು ಎಚ್ಚರಿಕೆ ವಹಿಸಬೇಕಾದ ಕ್ರಮಗಳೇನು, ಇದು ಬರದಂತೆ ಮಹಿಳೆಯರು ತಮ್ಮ ಜೀವನ ಶೈಲಿ ಹೇಗಿಟ್ಟುಕೊಳ್ಳುಬೇಕು, ಆಹಾರ ಪದ್ಧತಿ ಮತ್ತು ಮಹಿಳೆಯರು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು, ಸ್ತನದ ಅಳತೆ, ಬಣ್ಣದಲ್ಲಿ ವ್ಯತ್ಯಾಸಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ವಿವರಿಸಿದ ಅವರು, ನೋವು ರಹಿತ ಗಂಟುಗಳು ಕಂಡು ಬಂದಲ್ಲಿ ತಕ್ಷಣ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯಬೇಕು ಎಂದರು.
ಬೆಳಗಾವಿಯ ನೂತನ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ ಮತ್ತು ಆಸ್ಪತ್ರೆಯಲ್ಲಿನ ಸೇವೆ ಸೌಲಭ್ಯಗಳ ಕುರಿತು ಕೇಳುಗರಿಗೆ ಮಾಹಿತಿ ಹಂಚಿಕೊಂಡರು.
ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್ ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಿರ್ವಹಿಸಿದರು.