ಜಮಖಂಡಿ ನಗರದ ರಮಾನಿವಾಸದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಇದ್ದರು. 
ಜಿಲ್ಲೆ

ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ

Vijayapura - Desk - Gurappa Lokuri

ಜಮಖಂಡಿ: ರಾಜ್ಯದಲ್ಲಿ ಅನುದಾನದ ಕೊರತೆ ಇಲ್ಲ, 3 ಲಕ್ಷ ಕೋಟಿ ರೂ. ಖರ್ಚು ಮಾಡ್ತಿದ್ದೇವೆ. ಹಂತ ಹಂತವಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ರಮಾನಿವಾಸ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್, ಮುಡಾ ಕುರಿತು ತನಿಖೆ ನಡೆಯುತ್ತಿದೆ. ಅಲ್ಲಿವರೆಗೆ ಕಾಯಬೇಕು. ನಮ್ಮ ಹಾಗೂ ಸರ್ಕಾರದ ಕೈಯಲ್ಲಿಲ್ಲ ಎಂದರು.

ಎರಡು ವರ್ಷದಿಂದ ಸರ್ಕಾರ ಸುಸೂತ್ರವಾಗಿ ನಡೆದಿದೆ. ಸರಿಯಾಗಿ ಅನುದಾನವೂ ಬಿಡುಗಡೆಯಾಗುತ್ತಿದೆ. ಪ್ರವಾಹ ಪಿಡೀತ ಪ್ರದೇಶಗಳ ರಸ್ತೆಗಳ ಪುನರ್ನಿರ್ಮಾಣ ಮತ್ತು ರಿಪೇರಿ ಕಾರ್ಯವೂ ಹಂತ ಹಂತವಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸದ್ಯ ಮುಖ್ಯಮಂತ್ರಿಗಳ ಬದಲಾವಣೆ ಚರ್ಚೆ ಇಲ್ಲ, ಅದು ಹೈಕಮಾಂಡ್ ಹಂತದಲ್ಲಿದೆ. ಈ ಅಧಿವೇಶನದಲ್ಲಿ ಏನೂ ಕೊಡಲು ಆಗುವುದಿಲ್ಲ. ಏನೇ ಇದ್ದರೂ ಬಜೆಟ್‌ನಲ್ಲಿ ಘೋಷಣೆ ಆಗಬೇಕು ಎಂದರು.

ಡಿ.20 ರೊಳಗಾಗಿ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿ ತುಂಬುವ ಕೆಲಸ ಪೂರ್ಣಗೊಳ್ಳಲಿದೆ. ಜಮಖಂಡಿ, ಗೋಕಾಕ ಜಿಲ್ಲೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ವರ್ಷಗಳಿಂದ ಬೇಡಿಕೆ ಇದೆ. ಸರ್ಕಾರ ಒಪ್ಪಬೇಕು. ಅದಕ್ಕೆ ಕಾಲ ಬರಬಹುದು ಎಂದರಲ್ಲದೆ, ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ಚಿಕ್ಕಪಡಸಲಗಿ ಸೇತುವೆಯನ್ನು ಪುನ ರ್ನಿರ್ಮಾಣ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ವಿಜಯಪುರ ರಸ್ತೆಯಿಂದ ಹುನ್ನೂರವರೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ 65 ಕೋಟಿ ರೂ. ಅನುದಾನ ಮಂಜೂರು ಮಾಡಲು ಸಚಿವರು ಒಪ್ಪಿಕೊಂಡಿದ್ದಾರೆ. ಇದ್ದ ರಸ್ತೆ ವಿಸ್ತರಿಸಿ ಹುನ್ನೂರ ಗ್ರಾಮದ ಬಳಿಯ ಹಿಪ್ಪರಗಿ ರಸ್ತೆವರೆಗೆ ಬೈಪಾಸ್ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಸವದತ್ತಿ ಶಾಸಕ ಡಾ ವಿಸ್ವಾಸ ವೈದ್ಯ, ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಮಹಾದೇವ ಪಾಟೀಲ, ಸಿದ್ದು ಮಿಶಿ, ಮಹೇಶ ಕೋಳಿ, ರವಿ ಯಡಹಳ್ಳಿ, ಲಿಂಗರಾಜ ಪಾಟೀಲ, ಈಶ್ವರ ವಾಳೆನ್ನವರ, ಅಬುಬಕರ ಕುಡಚಿ ಇತರರಿದ್ದರು.