ಸುಳ್ಯ: ತಾಲೂಕಿನ ಪಂಜ ಸಮೀಪದ ಪೊಳೆಂಜ ಕಂರ್ಬುನೆಕ್ಕಿಲ ಎಂಬಲ್ಲಿ ಐದು ದಿನಗಳ ಅಂತರದಲ್ಲಿ ಮೂರು ಸಾಕು ನಾಯಿಗಳು ನಾಪತ್ತೆಯಾಗಿದ್ದು, ಚಿರತೆ ಹೊತ್ತೊಯ್ದಿರಬೇಕೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪಂಜದ ಕಂರ್ಬು ನೆಕ್ಕಿಲ ರಾಮಚಂದ್ರ ಭಟ್ ಎಂಬುವರ ಎರಡೂ ನಾಯಿಗಳು ಆ.28ರಂದು ರಾತ್ರಿ ಒಟ್ಟಿಗೆ ನಾಪತ್ತೆಯಾಗಿದ್ದು, ಬಳಿಕ ಕಂರ್ಬು ನೆಕ್ಕಿಲ ಧನಂಜಯ ಗೌಡ ಎಂಬುವರ ಒಂದು ನಾಯಿ ನಾಪತ್ತೆಯಾಗಿದೆ. ಅವರ ಮನೆ ಸಿಟೌಟ್‌ನಲ್ಲಿ ನಾಯಿ ಹೊರಳಾಡಿದ ಕುರುಹು ಇದ್ದು, ಮನೆಯ ಪಕ್ಕದ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಪಂಜ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಎರಡು ನಾಯಿಗಳು ವಿದೇಶಿ ತಳಿಯದ್ದಾಗಿದ್ದು, ಏಕಕಾಲದಲ್ಲಿ ನಾಪತ್ತೆಯಾಗಿರುವುದರಿಂದ ಎರಡು ಚಿರತೆಗಳು ಇದ್ದಿರಬೇಕೆಂದು ಜನರು ಊಹಿಸಿದ್ದಾರೆ.