ಜಿಲ್ಲೆ

ಹುಲಿ, ಚಿರತೆ ದಾಳಿಗೆ ಸಾಕುಪ್ರಾಣಿಗಳು ಬಲಿ

ಕಿರಣ್ ಗೌಡ.ಜಿ

ಗುಂಡ್ಲುಪೇಟೆ: ದೀಪಾವಳಿ ಹಬ್ಬದಂದೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ, ಚಿರತೆ ದಾಳಿ ನಡೆಸಿ ರೈತರ ಸಾಕುಪ್ರಾಣಿಗಳನ್ನು ಕೊಂದು ಹಾಕಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ವ್ಯಾಪ್ತಿಯ ಹಕ್ಕಲಪುರ, ಇಂಗಲವಾಡಿ, ಮಂಚಹಳ್ಳಿ ಹಾಗೂ ಅಗತಗೌಡನಹಳ್ಳಿ ಗ್ರಾಮಗಳಲ್ಲಿ ಹುಲಿ ಮತ್ತು ಚಿರತೆ ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕಿವೆ.

ಅಗತಗೌಡನಹಳ್ಳಿ ಗ್ರಾಮದ ನಾಗಪ್ಪ, ದೇಶೀಪುರ ಕಾಲನಿಯ ಚಿನ್ನಮ್ಮ, ಇಂಗಲವಾಡಿ ಗ್ರಾಮದ ಮಾದಪ್ಪ ಅವರ ಹಸುಗಳನ್ನು ಹುಲಿ ಕೊಂದು ಹಾಕಿದ್ದರೆ, ಮಂಚಹಳ್ಳಿ ಹಾಗೂ ಹಕ್ಕಲಪುರ ಗ್ರಾಮಗಳಲ್ಲಿ ಚಿರತೆ ದಾಳಿಗೆ ಕರುಗಳು ಬಲಿಯಾಗಿವೆ.

ಇದರಿಂದ ಈ ಭಾಗದ ಗ್ರಾಮಸ್ಥರು ಹಾಗೂ ರೈತರು ಭೀತಿಗೊಳಗಾಗಿದ್ದು ಸಂಜೆ ಕತ್ತಲಾದ ನಂತರ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ರೈತರು ತಮ್ಮ ಜಾನುವಾರುಗಳ ರಕ್ಷಣೆ ಬಗ್ಗೆ ತೀವ್ರ ಆತಂಕಕ್ಕೆ ಒಳಗಾಗಿದ್ದು ಕೂಡಲೇ ಅರಣ್ಯ ಇಲಾಖೆ ಹುಲಿ ಹಾಗೂ ಚಿರತೆಯನ್ನು ಸೆರೆಹಿಡಿದು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.

ಮಧ್ಯಾಹ್ನ ಕೂಂಬಿಂಗ್ ಕಾರ್ಯಾಚರಣೆ ಆರಂಭ: ಅಗತಗೌಡನಹಳ್ಳಿ ಇಂಗಲವಾಡಿ ಗ್ರಾಮಗಳಲ್ಲಿ ಹುಲಿ ಜಾನುವಾರುಗಳನ್ನು ಕೊಂದಿದ್ದ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಸಾಕಾನೆ ಪಾರ್ಥ ಸಾರಥಿ ನೆರವಿನಿಂದ ಕೂಂಬಿಂಗ್ ನಡೆಸಿದರು. ಆದರೆ ಎಲ್ಲಿಯೂ ಹುಲಿಯ ಜಾಡು ಪತ್ತೆಯಾಗಿಲ್ಲ. ಮಂಗಳವಾರವೂ ಕೂಂಬಿಂಗ್ ಮುಂದುವರೆಸಲಾಗುವುದು ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ತಿಳಿಸಿದ್ದಾರೆ.