ಜಿಲ್ಲೆ

ಪೆಟ್ರೋಲಿಯಂ ಪೈಪ್‌ಲೈನ್‌ಗೆ ಕನ್ನ ಕೊರೆದ ಆರೋಪಿ ಸೆರೆ

Dakshina Kannada

ಬಂಟ್ವಾಳ: ಸೊರ್ನಾಡು ಎಂಬಲ್ಲಿ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೈಪ್‌ಲೈನ್‌ಗೆ ಕನ್ನ ಕೊರೆದು ಪೆಟ್ರೋಲಿಯಂ ಉತ್ಪನ್ನ ಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ಸ್ಥಳೀಯ ಅರ್ಬಿ ನಿವಾಸಿ ಐವನ್ ಚಾರ್ಲ್ ಪಿಂಟೋ(43), ಆತನಿಗೆ ಸಹಕರಿಸಿದ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್, ಕಣ್ಣೂರು ನಿವಾಸಿ ಜೋಯೆಲ್ ಪ್ರೀತಮ್ ಡಿಸೋಜ ಎಂಬುವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಒಂದು ಜೀಪ್, ಡಿಸೇಲ್ ಕೊಂಡು ಹೋಗಲು ಬಳಸಿದ ಕ್ಯಾನ್ ಮತ್ತು ಡೀಸೆಲನ್ನು ವಶ ಪಡಿಸಿಕೊಂಡಿದ್ದಾರೆ.

ಮಂಗಳೂರು- ಬೆಂಗಳೂರು ಸರಬರಾಜಾಗುವ ಪೆಟ್ರೋಲಿಯಂ ಪೈಪ್‌ಲೈನ್ ಸೊರ್ನಾಡು ಬಳಿ ಆರೋಪಿ ಐವನ್‌ಗ ಸೇರಿದ ಜಮೀನಿನಲ್ಲಿ ಹಾದು ಹೋಗಿದ್ದು, ಆತ ಪಿಎಂಎಚ್‌ಬಿಎಲ್ ಪೈಪ್‌ಲೈನ್‌ಗೆ ಕನ್ನ ಕೊರೆದು ಪೆಟ್ರೋಲಿಯಂ ಉತ್ಪನ್ನಗಳನ್ನು ಕಳವು ಮಾಡುತ್ತಿದ್ದ. ಜುಲೈ 11ರಂದು ಸಂಜೆ 5 ಗಂಟೆಯಿಂದ ಪೆಟ್ರೋಲಿಯಂ ಹರಿವಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೈಪ್‌ಲೈನ್‌ನಲ್ಲಿ ಕೋಟಿಂಗ್ ಡ್ಯಾಮೇಜ್ ಆಗಿರಬಹುದೆಂದು ಕಂಪನಿಯವರು ಸರ್ವೇ ಮೂಲಕ ಪರಿಶೀಲಿಸಿದಾಗ ಸಿಎಚ್ 23.5ಕೆಎಂ ಎಂಬಲ್ಲಿ ಹರಿವು ಸೋರಿಕೆಯಾಗಿರುವುದು ಕಂಡುಬಂದು ಭೂಮಿಯನ್ನು ಅಗೆದು ನೋಡಿದಾಗ ಪೈಪ್‌ಲೈನ್‌ನಿಂದ ಕಳವು ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಎಂಎಚ್‌ಬಿ ಲಿಮಿಟೆಡ್‌ನ ಸ್ಟೇಷನ್ ಇನ್‌ಚಾರ್ಜ್ ಅಧಿಕಾರಿ ರಾಜನ್ ಜಿ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನಿಗೆ ಈ ಕೃತ್ಯದಲ್ಲಿ ಪೈಪ್‌ಲೈನ್‌ಗೆ ಹೋಲ್ ತೆಗೆದು ವೆಲ್ಡಿಂಗ್ ಮಾಡಿ ಪೈಪ್‌ಲೈನ್ ಅಳವಡಿಸಿಕೊಟ್ಟ ಆರೋಪದಡಿ ಅಜಿತ್ ಹಾಗೂ ಪ್ರೀತಮ್ ಡಿಸೋಜ ಅವರನ್ನು ದಸ್ತಗಿರಿ ಮಾಡಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಒಟ್ಟು 40 ಲಕ್ಷ ರೂಪಾಯಿ ಮೌಲ್ಯದ ಪೆಟ್ರೋಲಿಯಂ ಕಳವಾಗಿರುವುದಾಗಿ ತಿಳಿದು ಬಂದಿದೆ.

ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೈಂಟೀನ್ ಡಿಸೋಜ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ಎಚ್.ಸಿಗಳಾದ ಜನಾರ್ದನ, ಗೋಣಿ ಬಸಪ್ಪ, ಸುರೇಶ್, ಪಿ.ಸಿಗಳಾದ ಮನೋಜ್, ಪುನೀತ್ ಕಾರ್ಯಾಚರಣೆಯಲ್ಲಿದ್ದರು.