ಜಿಲ್ಲೆ

ಪೆಟ್ರೋಲ್ ಹೆಚ್ಚಳ ಜನವಿರೋಧಿ ಕ್ರಮ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಕಿಡಿ

ಕಾರವಾರ: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಿರುವುದು ಜನವಿರೋಧಿ ಕ್ರಮ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಕಿಡಿಕಾರಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊದಲೇ ಜೀವನಾವಶ್ಯಕ ವಸ್ತುಗಳ ಬೆಲೆ ವಿಪರೀತ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿ ಅವರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗ್ಯಾರಂಟಿಗಾಗಿ ಹಣ ಹೊಂದಿಸಲಾರದೆ ಪರದಾಡುತ್ತಿರುವ ಸರ್ಕಾರ ಈಗ ಸಂಪನ್ಮೂಲ ಕ್ರೂಢೀಕರಣಕ್ಕೆ ಏನೆಲ್ಲ ವಸ್ತುಗಳ ಬೆಲೆ ಹೆಚ್ಚಳ ಮಾಡಬಹುದೋ ಅವೆಲ್ಲ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ. ಇಂಧನ ಬೆಲೆ ಹೆಚ್ಚಳದಿಂದ ಸಾಗಣೆ ವೆಚ್ಚದಲ್ಲಿ ಹೆಚ್ಚಳವಾಗಿ ಇತರ ಎಲ್ಲ ವಸ್ತುಗಳ ಬೆಲೆಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.


ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಆದರೆ, ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಾಗಿ ಬೆಲೆಗಳ ಹೆಚ್ಚಳದ ಹೊರೆಯನ್ನು ಜನರ ಮೇಲೆ ಹೇರುತ್ತಿದೆ. ಒಂದು ಕೈಯಿಂದ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಿಂದ ಕೊಟ್ಟಿರುವುದಕ್ಕಿಂತ ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡುತ್ತಿದೆ. ಅಷ್ಟಕ್ಕೂ ಗ್ಯಾರಂಟಿ ಯೋಜನೆ ಸಹ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ನಿಮಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬೆಲೆ ಹೆಚ್ಚಳವನ್ನು ಕೈಬಿಡಿ. ಇಲ್ಲದಿದ್ದಲ್ಲಿ ಜನರೇ ನಿಮಗೆ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.