ಬೆಂಗಳೂರು: ಪರಿಸರ ಮಾಲಿನ್ಯ ತಡೆಯಲು ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಏ.1ರಿಂದ ಬಿಎಸ್6 ಇಂಧನ ಜಾರಿಗೆ ತರುತ್ತಿದ್ದು, ಇಂಡಿಯಲ್ ಆಯಿಲ್ ಕಾಪೋರೇಷನ್ ಲಿಮಿಟೆಡ್ (ಐಒಸಿಎಲ್)ನಲ್ಲಿ ಬಿಎಸ್6 ತೈಲ ಪ್ರಾಯೋಗಿಕವಾಗಿ ಸಿಗುತ್ತಿದೆ.
ಬಿಎಸ್4 ತೈಲದಲ್ಲಿ 50 ಪಿಪಿಎಂ ಪ್ರಮಾಣದ ಸಲ್ಪರ್ ಅಂಶ ಇದ್ದದ್ದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿತ್ತು. ಇದನ್ನರಿತ ಕೇಂದ್ರ ಸರ್ಕಾರವು ಬಿಎಸ್6 ಇಂಧನವನ್ನು ಜಾರಿಗೆ ತರುತ್ತಿದೆ. ಬಿಎಸ್6 ತೈಲದಲ್ಲಿ 10 ಪಿಪಿಎಂ ಪ್ರಮಾಣದ ಸಲ್ಪರ್ ಅಂಶವಿದ್ದು, ಮಾಲಿನ್ಯ ನಿಯಂತ್ರಣವಾಗಲಿದೆ. ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳಲ್ಲಿ ಏಪ್ರಿಲ್1ರಿಂದ ಅಧಿಕೃತವಾಗಿ ಬಿಎಸ್6 ಇಂಧನ ಸಿಗಲಿದೆ. ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಈಗಾಗಲೇ ಬಿಎಸ್6 ಆಟೋ ಇಂಧನವನ್ನು ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿ ಮತ್ತಿತರ ರಾಜ್ಯಗಳಲ್ಲಿ ಪರಿಚಯಿಸಲಾಗಿದೆ ಎಂದು ಐಒಸಿಎಲ್ ರಾಜ್ಯ ಘಟಕ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಲ್. ಪ್ರಮೋದ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
17 ಸಾವಿರ ಕೋಟಿ ರೂ. ಬಂಡವಾಳ: ಪೆಟ್ರೋಲ್ ಬಂಕ್ಗಳಲ್ಲಿ ಬಿಎಸ್6 ತೈಲ ಮಾರಾಟ ಮಾಡಲು ಭಾರತದ ಅತಿ ದೊಡ್ಡ ತೈಲೋತ್ಪನ್ನ ಹಾಗೂ ಸಂಸ್ಕರಣಾ ಸಂಸ್ಥೆಗಳಾದ ಐಒಸಿಎಲ್, ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್(ಎಚ್ಪಿಸಿಎಲ್) ಸೇರಿ 28 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. ಐಒಸಿಎಲ್ನಿಂದ ಅತಿ ಹೆಚ್ಚು 17 ಸಾವಿರ ಕೋಟಿ ರೂ. ಬಂಡವಾಳ ಹೂಡಲಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದು, ಚಿತ್ರದುರ್ಗದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲು 500 ಕೋಟಿ ರೂ. ಬಂಡವಾಳ ಹೂಡಲಾಗಿದೆ ಎಂದು ಅವರು ವಿವರಿಸಿದರು.
8 ಕೋಟಿ ಜನರು ಎಲ್ಪಿಜಿ ಸಂಪರ್ಕ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ದೇಶಾದ್ಯಂತ 8 ಕೋಟಿ ಜನರು ಎಲ್ಪಿಜಿ ಸಂಪರ್ಕ ಪಡೆದಿದ್ದು, ಈ ಪೈಕಿ ರಾಜ್ಯದಲ್ಲಿ 1.6 ಕೋಟಿ ಜನರು ಈ ಸೌಲಭ್ಯ ಹೊಂದಿದ್ದಾರೆ. ಹೊಗೆ ಮುಕ್ತ ರಾಜ್ಯವನ್ನಾಗಿಸಲು ಮತ್ತಷ್ಟು ಎಲ್ಪಿಜಿ ಸಂಪರ್ಕ ಕಲ್ಪಿಸಲಾಗುವುದು. ಇಥೆನಾಲ್ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿವೆ. ಮುಂದಿನ ದಿನಗಳಲ್ಲಿ ಇಥೆನಾಲ್ ಬಳಸುವ ಮೂಲಕ ತೈಲ ಆಮದು ಕಡಿಮೆಗೊಳಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಪ್ರಮೋದ್ ತಿಳಿಸಿದರು.
ಎಲೆಕ್ಟ್ರಾನಿಕ್ ಚಾರ್ಜಿಂಗ್ ಕೇಂದ್ರ: ಮೊದಲ ಹಂತದಲ್ಲಿ 500 ಐಒಸಿಎಲ್ ಪೆಟ್ರೋಲ್ ಬಂಕ್ಗಳಲ್ಲಿ ಎಲೆಕ್ಟ್ರಾನಿಕ್ ಚಾರ್ಜಿಂಗ್, 8 ಬ್ಯಾಟರಿ ಸ್ವೆಪಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಮಾ.31ರೊಳಗೆ ಈ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ನೈಸಗಿರ್ಕ ಅನಿಲಕ್ಕೆ ಪರ್ಯಾಯವಾಗಿ ಜೈವಿಕ ಅನಿಲ ಉತ್ಪಾದಿಸಲು ಹಲವರು ಮುಂದೆ ಬಂದಿದ್ದಾರೆ ಎಂದು ಪ್ರಮೋದ್ ಹೇಳಿದರು.
ದೊಡ್ಡ ಹೋಟೆಲ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರಿದ ಎಣ್ಣೆ ಉಳಿಯುತ್ತಿದೆ. ಇದನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸ. ಆದ್ದರಿಂದ ಈ ಎಣ್ಣೆಯನ್ನು ಸಂಗ್ರಹಿಸಿ ಜೈವಿಕ ಅನಿಲವನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಯುತ್ತಿದೆ. | ಡಿ.ಎಲ್.ಪ್ರಮೋದ್ ಕಾರ್ಯನಿರ್ವಾಹಕ ನಿರ್ದೇಶಕ, ಐಒಸಿಎಲ್ ರಾಜ್ಯ ಘಟಕ