ಜಿಲ್ಲೆ

ಮಣ್ಣಗುಡ್ಡೆಯಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ವಿರೋಧ

Mangaluru - Hariprasad Rai


ಮಂಗಳೂರು : ಮಣ್ಣಗುಡ್ಡೆ ಜಂಕ್ಷನ್‌ನಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ಅವಕಾಶ ನೀಡದಂತೆ ಕೋರಿ ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಪೆಟ್ರೋಲ್ ಬಂಕ್ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಎಂಟು ಬೃಹದಾಕಾರದ ವೃಕ್ಷಗಳಿದ್ದು ಪರಿಸರಕ್ಕೆ ತಂಪು ನೀಡುತ್ತಿದೆ.
ಸ್ಥಳದಲ್ಲಿ ಪೋಸ್ಟ್‌ಆಫೀಸ್, ವಾಚಾನಾಲಯ ಕಟ್ಟಡಗಳಿದ್ದು ಸಾರ್ವಜನಿಕರು ಇದನ್ನು ಉಪಯೋಗಿಸುತ್ತಿದ್ದಾರೆ. ಮಣ್ಣಗುಡ್ಡೆ ಗುರ್ಜಿ ಸಂದರ್ಭ ಕಳೆದ 154 ವರ್ಷಗಳಿಂದ ಸಾವಿರಾರು ದೀಪಗಳನ್ನು ಹಚ್ಚುವುದು ಮತ್ತು ಪಟಾಕಿ ಸಿಡಿಸುವುದು ಸಂಪ್ರದಾಯ.
ಪೆಟ್ರೋಲ್ ಬಂಕ್ ಸ್ಥಾಪನೆಗೆ ಅವಕಾಶ ನೀಡಿದರೆ ಬೃಹತ್ ಮರಗಳನ್ನು ಕತ್ತರಿಸಬೇಕಾಗುತ್ತದೆ. ಮಣ್ಣಗುಡ್ಡೆ ಪರಿಸರದಲ್ಲಿ ಎರಡು ಪೆಟ್ರೋಲ್ ಬಂಕ್‌ಗಳು ಸಮೀಪದಲ್ಲಿದ್ದು ಇನ್ನೊಂದು ಪೆಟ್ರೋಲ್ ಬಂಕ್‌ನ ಅವಶ್ಯಕತೆ ಇರುವುದಿಲ್ಲ. ಜಮೀನಿನ ವಿರುದ್ಧ ದಿಕ್ಕಿನಲ್ಲಿ ಮೆಸ್ಕಾಂ ಸಬ್‌ಸ್ಟೇಷನ್ ಕೂಡ ಇದೆ. ಪೆಟ್ರೋಲ್ ಬಂಕ್‌ನಿಂದ ಏನಾದರೂ ಅವಘಡ ಸಂಭವಿಸಿದರೆ ವಿದ್ಯುತ್ ಅವಘಡಕ್ಕೂ ಕಾರಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಜಾಗವನ್ನು ಮಣ್ಣಗುಡ್ಡೆ ಗುರ್ಜಿ ಸಮಿತಿಗೆ ವಹಿಸಿದರೆ ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕಿಂಗ್, ಸಾಮಾಜಿಕ ಕಾರ್ಯಕ್ರಮಕ್ಕೆ ಸಮುದಾಯ ಭವನ, ವಾಚಾನಾಲಯ, ಪೋಸ್ಟ್ ಆಪೀಸ್ ಅಲ್ಲದೆ ಮಹಾನಗರಪಾಲಿಕೆಯ ಕಚೇರಿಯ ಉಪವಿಭಾಗವಾಗಿ ತೆರೆಯಲು ಕಚೇರಿಗಳು ಎಲ್ಲ ವ್ಯವಸ್ಥೆಯನ್ನು ಮಣ್ಣಗುಡ್ಡೆ ಗುರ್ಜಿ ಸಮಿತಿ ವಹಿಸಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಮಿತಿಯ ಅಧ್ಯಕ್ಷ ರಮಾನಂದ ಪಾಂಗಾಳ್, ಕರುಣಾನಂದ ರಾವ್, ರಾಜೇಂದ್ರ ಕಲ್ಬಾವಿ, ಗುರುಚರಣ್, ಭರತ್ ರಾವ್, ಗಿರೀಶ್, ಕಾರ್ಪೋರೇಟರ್ ಸಂಧ್ಯಾ ಮೋಹನ್ ಉಪಸ್ಥಿತರಿದ್ದರು.