ಜಿಲ್ಲೆ

ಆಟೋಗಳಿಗೆ ಜಿಲ್ಲಾ ವ್ಯಾಪ್ತಿ : ಫಾರೂಕ್ ಜಿಂದಗಿ ಆಗ್ರಹ : ಪೆಟ್ರೋಲ್ ಆಟೋಗೆ ಸರ್ಕಾರದ ತಾರತಮ್ಯ ಆರೋಪ

ಸೌಮ್ಯ ಆರ್

ಉಪ್ಪಿನಂಗಡಿ: ಪ್ರಯಾಣಿಕರನ್ನು ಅವರು ಬಯಸಿದ ಊರಿಗೆ ಕರೆದೊಯ್ಯಲು ಮುಂದಾದರೆ ಕರ್ತವ್ಯ ವ್ಯಾಪ್ತಿ ಮೀರಿದ ಆಪಾದನೆಯಡಿ ದಂಡ ವಿಧಿಸುವುದು ಅಮಾನವೀಯ ನಡೆ. ಆಟೋಗಳಿಗೆ ಈಗಿರುವ ತಾಲೂಕು ವ್ಯಾಪ್ತಿ ಸಡಿಲಿಸಿ ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಬೇಕೆಂದು ಉಪ್ಪಿನಂಗಡಿ ನೇತ್ರಾವತಿ ಆಟೋ ಚಾಲಕ-ಮಾಲೀಕರ ಸಂಘ ಸರ್ಕಾರವನ್ನು ಒತ್ತಾಯಿಸಿದೆ ಎಂದು ಸಂಘದ ಅಧ್ಯಕ್ಷ ಫಾರೂಕ್ ಜಿಂದಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇರಳದಲ್ಲಿ ರಾಜ್ಯವ್ಯಾಪಿ ಸೇವೆ ಸಲ್ಲಿಸಲು ಆಟೋ ಚಾಲಕರಿಗೆ ಅನುಮತಿ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ವಿದ್ಯುತ್ ಚಾಲಿತ ಆಟೋ ಚಾಲಕರಿಗೆ ಮಾತ್ರ ಜಿಲ್ಲಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಅವಕಾಶ. ಪೆಟ್ರೋಲ್ ಆಟೋ ಚಾಲಕರಿಗೆ ಕೇವಲ ತಾಲೂಕು ವ್ಯಾಪ್ತಿ. ಉಪ್ಪಿನಂಗಡಿಯಂತಹ ಪ್ರದೇಶದ ನಾಲ್ಕೈದು ಕಿ.ಮೀ. ವ್ಯಾಪ್ತಿಯೊಳಗೆ ಮೂರು ತಾಲೂಕು ಲಭಿಸುತ್ತದೆ. ಎಲ್ಲಿಗೆ ಹೋದರೂ ತಾಲೂಕು ಗಡಿ ವ್ಯಾಪ್ತಿ ಉಲ್ಲಂಘನೆಯಾಗುತ್ತಿರುತ್ತದೆ. ತಪ್ಪಲ್ಲದ ತಪ್ಪಿಗೆ ನಿತ್ಯ ನೂರಾರು ರೂ. ದಂಡ ಪಾವತಿಸಬೇಕಾಗುತ್ತದೆ. ಬೇರೆ ತಾಲೂಕಿನಲ್ಲಿ ಅಪಘಾತ ಸಂಭವಿಸಿದರೆ ವಿಮೆಯೂ ದೊರಕುವುದಿಲ್ಲ ಎಂದರು.

ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಅಣ್ಣಿಗೌಡ ಮಲ್ಲಕಲ್ಲು, ಕಲಂದರ್ ಶಾಫಿ, ಅಬ್ದುಲ್ ಮಜೀದ್, ಸೇಸಪ್ಪ ನೆಕ್ಕಿಲು, ಅನ್ಸಾರ್ ಸುದ್ದಿಗೋಷ್ಠಿಯಲ್ಲಿದ್ದರು.