ಜಿಲ್ಲೆ

ಕಾರ್ಮಿಕ ಕಾನೂನು ಜಾರಿಗೊಳಿಸಲು ಆಗ್ರಹ: ಸಿಐಟಿಯುನಿಂದ ಸಿಎಂಗೆ ಮನವಿ ಸಲ್ಲಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾರ್ಮಿಕ ಪರವಾದ ಕಾನೂನುಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸಿಐಟಿಯು ಜಿಲ್ಲಾ ಸಮಿತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸಿದ ಸಿಎಂ ಅವರಿಗೆ ಹೆಲಿಪ್ಯಾಡ್‌ನಲ್ಲಿ ಮನವಿ ಸಲ್ಲಿಸಿದ ಸಮಿತಿ ಕಾರ್ಯಕರ್ತರು, ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಮಿಕ ಸಮ್ಮೇಳನ ಆಯೋಜಿಸುವಂತೆ ಒತ್ತಾಯಿಸಿದರು.

29 ಕಾನೂನುಗಳನ್ನು 4 ಸಂಹಿತೆಗಳಾಗಿ ಮಾಡಿರುವ ಕೇಂದ್ರ ಶಾಸನಗಳ ನಿಯಮಾವಳಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ವಿದ್ಯುಚ್ಛಕ್ತಿ ಖಾಸಗೀಕರಣ ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ತಿರಸ್ಕರಿಸಬೇಕು. ಎಲ್ಲ ವಿಭಾಗಗಳ ಕಾರ್ಮಿಕರಿಗೆ 31 ಸಾವಿರ ರೂ ವೇತನ ನೀಡಬೇಕು. ಜಿಲ್ಲೆಯಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು. ಅಕ್ರಮ ಲೇಆಫ್, ಲಾಕೌಟ್‌ಗೆ ಅನುಮತಿ ನೀಡಬಾರದು. ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯನ್ನು ಬಲಪಡಿಸಿ ಅಭಿವೃದ್ಧಿಪಡಿಸುವುದು ಸೇರಿದಂತೆ 42 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಂಜುಳಾರಾವ್, ಜಯಲಕ್ಷ್ಮಮ್ಮ ಇತರರಿದ್ದರು.