ಜಿಲ್ಲೆ

ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಿ: ಬಿಜೆಪಿ ರೈತ ಮೋರ್ಚಾದಿಂದ ಮನವಿ ಸಲ್ಲಿಕೆ

ಮಂಡ್ಯ: ಮೈಶುಗರ್ ಕಾರ್ಖಾನೆಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ ಅಲ್ಲಿನ ನೌಕರರ ಬೇಡಿಕೆಗಳನ್ನು ಈಡೇಸಬೇಕೆಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಘಟಕದ ಕಾರ್ಯಕರ್ತರು ಕಾರ್ಖಾನೆ ಆಡಳಿತಾಧಿಕಾರಿ ಮನುಜಾಶ್ರೀ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಖಾನೆಯಿಂದ 2025-26ನೇ ಸಾಲಿನಲ್ಲಿ ರೈತರು ಸರಬರಾಜು ಮಾಡಿದ ಕಬ್ಬಿಗೆ ಇಲ್ಲಿಯವರೆಗೆ ಹಣ ಪಾವತಿ ಮಾಡಿಲ್ಲ. ಈ ಬಾರಿ ಕಬ್ಬನ್ನು ಕಂಪನಿಯು ಸರಿಯಾಗಿ ಅರೆಯದೆ ರೈತರು ಬೆಳೆದಿರುವ ಕಬ್ಬು ಇನ್ನು ಕಟಾವು ಮಾಡದೆ ತೊಂದರೆಗೆ ಈಡಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ ಬಾರಿ ಮೈಶುಗರ್ ಕಂಪನಿಗೆ ಒಳಪಡದ ಜಮೀನಿನ ಕಬ್ಬುನ್ನು ಬೇರೆ ಕಂಪನಿಗಳಿಗೆ ಹೋಗದಂತೆ ಜಿಲ್ಲಾಧಿಕಾರಿ ಅವರು ಶಿಸ್ತು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಈ ಬಾರಿ ಕಬ್ಬಿಗೆ ಹಣ ಪಾವತಿ ಮಾಡದ ಭಯದಲ್ಲಿ ರೈತರು ಉಳಿದ ಕಬ್ಬನ್ನು ಬೇರೆ ಕಂಪನಿಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ದೂರಿದರು.

ಮೈಶುಗರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರನ್ನು ಸ್ವಯಂ ನಿವೃತ್ತಿ ಹೊಂದಿರುವವರಿಗೆ ಬರಬೇಕಾದ ಸವಲತ್ತನ್ನು ಸರಿಯಾಗಿ ನೀಡುತ್ತಿಲ್ಲ. ಈ ಸಂಬಂಧ ಪಟ್ಟ ನೌಕರರು ನ್ಯಾಯಾಲಯದ ಮೋರೆ ಹೋದರು. ಆಗ ಕಂಪನಿಗೆ ಸಂಭಂದಿಸಿದ ಸವಲತ್ತುಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ, ಇದು ಮುಂದುವರಿದರೆ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮೋರ್ಚಾದ ಎಚ್.ಆರ್.ಅಶೋಕ್‌ಕುಮಾರ್, ಶಿವಕುಮಾರ್, ಜವರೇಗೌಡ, ವೈರಮುಡಿ, ಬಿ.ಟಿ.ಶಿವಲಿಂಗಯ್ಯ, ನಿತ್ಯಾನಂದ, ಕೃಷ್ಣ, ನಂದೀಶ್, ಬೇಲೂರು ಬೊಮ್ಮೇಶ್, ಶಿವಲಿಂಗಯ್ಯ, ಪ್ರಮೋದ್, ಪ್ರಸನ್ನ ಇತರರಿದ್ದರು.