ಬೀಳಗಿ: ವಲಯ ಅರಣ್ಯ ಅಧಿಕಾರಿ ಹನುಮಂತ ಡೋಣಿ ನಡೆ ಖಂಡಿಸಿ ಮತ್ತು ಅಮಲಝರಿ ಜನರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ನೂರಾರು ರೈತ ಮಹಿಳೆಯರು ಹಾಗೂ ರಾಜ್ಯ ರೈತ ಸಂಘ ಸಹಯೋಗದಲ್ಲಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಅಮಲಝರಿ ಗ್ರಾಮದಿಂದ ಐದು ಟ್ರ್ಯಾಕ್ಟರ್‌ಗಳ ಮೂಲಕ ಬೀಳಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ಅರಣ್ಯ ಅಧಿಕಾರಿ ವಿರುದ್ಧ ಧಿಕ್ಕಾರ ಕೂಗುತ್ತ ಆಕ್ರೋಶ ಹೊರಹಾಕಿದರು.
ವಲಯ ಅರಣ್ಯ ಅಧಿಕಾರಿ ಎಚ್.ಬಿ.ಡೋಣಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದು ಕುಳಿತರು. ನಂತರ ಸ್ಥಳಕ್ಕೆ ಬಂದ ಡಿಎಫ್ಒ ಸಿ.ಜಿ.ಮಿರ್ಜಿ ಹಾಗೂ ತಹಸೀಲ್ದಾರ್ ಸುಹಾಸ ಇಂಗಳೆ ಅವರ ಸಮ್ಮುಖದಲ್ಲಿ ವಲಯ ಅರಣ್ಯಾಧಿಕಾರಿ ಹನುಮಂತ ಡೋಣಿ ಬೇಷರತ್ತಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದರು.
ಅಮಲಝರಿ ಗ್ರಾಮದಲ್ಲಿ ಹಲವಾರು ಕುಟುಂಬಗಳಿಗೆ ಮನೆ ಕಟ್ಟಿಕೊಡಲಾಗಿದ್ದು, ಕೂಡಲೇ ಹಕ್ಕು ಪತ್ರವನ್ನು ಕೊಡುವಂತೆ ತಹಸೀಲ್ದಾರ್‌ಗೆ ಒತ್ತಾಯಿಸಿದರು. ಗ್ರಾಮದ ಜನರಿಗೆ ಹಕ್ಕುಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ತಹಸೀಲ್ದಾರ್ ಹೇಳಿದರು.
ಕಟ್ಟಿಗೆ ತರಲು ಗುಡ್ಡಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಕೆಲಹೊತ್ತು ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ಮಾಡಲು ಅವಕಾಶವಿಲ್ಲ. ನಾವು ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಬಳಗಾನೂರು ಮಾತನಾಡಿ, ಗ್ರಾಮಸ್ಥರು ಕಟ್ಟಿಗೆ ತರಲು ಗುಡ್ಡಕ್ಕೆ ಹೋಗುವಾಗ ಕೊಡಲಿ ಅಥವಾ ಹರಿತವಾದ ಯಾವುದೇ ರೀತಿಯ ಆಯುಧ ಒಯ್ಯುವ ಹಾಗಿಲ್ಲ. ಒಣಕಟ್ಟಿಗೆ ಸಂಗ್ರಹಿಸಿಕೊಂಡು ಬರಬೇಕು ಎಂದರು.
ಪ್ರತಿಭಟನಾಕಾರರು ತಮ್ಮ ಮನೆಯಿಂದ ತಂದಿದ್ದ ಬುತ್ತಿಯನ್ನು ಕಚೇರಿ ಆವರಣದಲ್ಲಿ ಊಟ ಮಾಡಿದ ನಂತರ ಪ್ರತಿಭಟನೆ ಹಿಂಪಡೆದರು. ರೈತ ಮುಖಂಡರಾದ ಪರಶುರಾಮ ಮಂಟೂರ, ಸದಾಶಿವ ಆಗೋಜಿ, ಮೌನೇಶ ಬಡಿಗೇರ, ಲಕ್ಷ್ಮಣ ಕಳೆಪ್ಪನವರ, ಸಿದ್ದಪ್ಪ ಜೀರಗಾಳ, ಮೀನಾಕ್ಷಿ ಪರೀಟ, ಮಹಾದೇವಿ ದೂದಿಮನಿ, ಚಂದ್ರವ್ವ ತಳವಾರ ಇತರರಿದ್ದರು.