ಮಂಡ್ಯ: ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಗೂಂಡಾ ಕಾಯ್ದೆಯಡಿ ವಿಚಾರಣೆಗೊಳಪಡಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾನೂನು ಪ್ರಕೋಷ್ಠದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿಗೆ ಮನವಿ ಸಲ್ಲಿಸಲಾಯಿತು. ಕೋಮುಗಲಭೆ ಸೃಷ್ಟಿಸುವ ದುರುದ್ದೇಶದಿಂದ ಗಣೇಶ ಮೂರ್ತಿ ಮತ್ತು ಸಾರ್ವಜನಿಕರ ಮೇಲೆ ಕಲ್ಲು ತೂರಲಾಗಿದೆ. ಧಾರ್ಮಿಕ ಸಂಘರ್ಷಕ್ಕೆ ಕಾರಣೀಕರ್ತರಾದ ವ್ಯಕ್ತಿಗಳು ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧಾರ್ಮಿಕ ಹಕ್ಕು ಅನುಷ್ಠಾನ ಮತ್ತು ಆಚರಣೆಗೆ ಅಡ್ಡಿಯುಂಟು ಮಾಡುವುದು ಅಪರಾಧವೆಂದು ತಿಳಿದಿದ್ದರೂ ಹಿಂದು ಧಾರ್ಮಿಕ ಆಚರಣೆಗೆ ಅಡ್ಡಿಯುಂಟು ಮಾಡಲಾಗಿದೆ. ಕೋಮುಗಲಭೆ ಸೃಷ್ಟಿಸಿರುವುದಲ್ಲದೇ ಸಾಮಾಜಿಕ ಸಮುದಾಯದ ನೆಮ್ಮದಿ ಹಾಳು ಮಾಡಿರುವುದು ಘೋರ ಅಪರಾಧ. ಈಗಾಗಲೇ ಆರೋಪಿಗಳೆಂದು ಗುರುತಿಸಿ ಪೊಲೀಸರು ಬಂಧಿಸಿರುವ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಬೇಕು. ಘಟನೆಗೆ ಕಾರಣಕರ್ತರಾದ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು. ಇಂತಹ ಕೋಮು ಸಂಘರ್ಷ ಸೃಷ್ಟಿಸುವ ಯಾವುದೇ ರೀತಿಯ ಘಟನೆಗಳು ಇನ್ನು ಮುಂದೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅಂತೆಯೇ ಪ್ರಕರಣ ಖಂಡಿಸಿ ಮದ್ದೂರು ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಜನಸಾಮಾನ್ಯರ ಮೇಲೆ ಪೊಲೀಸ್ ಇಲಾಖೆಯಿಂದ ಅಮಾನುಷವಾಗಿ ಸುಖಾಸುಮ್ಮನೆ ಲಾಠಿ ಚಾರ್ಜ್ ಮಾಡಲಾಗಿದೆ. ಮಾತ್ರವಲ್ಲದೆ 500ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇದು ಖಂಡನೀಯ. ಆದ್ದರಿಂದ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಕೋಷ್ಠದ ಪ್ರಸನ್ನ, ಎಂ.ಎನ್.ರೇವಣ್ಣ, ಸುಮಂತ್, ಪ್ರಸನ್ನ, ಮಲ್ಲೇಶ್, ಸುವರ್ಣ, ಮಂಜು, ನರಸಿಂಹಮೂರ್ತಿ, ಚಂದ್ರಕಾಂತ್, ವಿಶ್ವನಾಥ್, ಅಯ್ಯಪ್ಪ, ಗಣೇಶ್ ಇತರರಿದ್ದರು.