ಜಿಲ್ಲೆ

ಜ.28ರಿಂದ ಪಿಇಟಿಯಲ್ಲಿ ಕೆವಿಎಸ್ ಕಪ್ ಟೂರ್ನಿ: ಸಂಸ್ಥೆ ನಿರ್ದೇಶಕ ಡಾ.ರಾಮಲಿಂಗಯ್ಯ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಪಿಇಟಿ ಸಂಸ್ಥೆಯ ಸಂಸ್ಥಾಪಕರೂ ಆದ ನಿತ್ಯಸಚಿವ ಕೆ.ವಿ.ಶಂಕರಗೌಡ ಸ್ಮರಣಾರ್ಥ ಸಂಸ್ಥೆಯ ವತಿಯಿಂದ ಜ.28ರಿಂದ 30ರವರೆಗೆ ಪಿಇಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ‘ಕೆವಿಎಸ್ ಕಪ್’ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.

ಪಂದ್ಯಾವಳಿಯ ಉದ್ಘಾಟನೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ನೆರವೇರಿಸಲಿದ್ದು, ಉಪಾಧ್ಯಕ್ಷ ಬಸವಯ್ಯ, ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಟೂರ್ನಿಯಲ್ಲಿ ಚಲನಚಿತ್ರ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಟರಾದ ಲೂಸ್‌ಮಾದ ಖ್ಯಾತಿಯ ಯೋಗೇಶ್, ಕೆಜಿಎ್ ಗರುಡ ಖ್ಯಾತಿಯ ರಾಮ್, ರವಿಶಂಕರ್‌ಗೌಡ, ಹರ್ಷ ಸಿ.ಎಂ.ಗೌಡ, ವಿವಾನ್, ಸಾಗರ್ ಬಿಳೀಗೌಡ, ಅಭಿಲಾಷ್ ದಳಪತಿ, ರಂಜಿತ್‌ಕುಮಾರ್, ದಿಲೀಪ್ ಕೆಂಪೇಗೌಡ, ದರ್ಶಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕರಾದ ವ್ಯಾಸರಾಜ್, ಕರಿಬಸವ ತಡಕಲ್ ಜತೆಗೆ ಪ್ರಾದೇಶಿಕ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ. ಟೂರ್ನಿಗೆಂದು ನಾಲ್ಕು ತಂಡಗಳ ರಚನೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

30ರಂದು ಸಂಜೆ 4ಕ್ಕೆ ಸಮಾರೋಪ ಕಾರ್ಯಕ್ರಮ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮತ್ತೋರ್ವ ಉಪಾಧ್ಯಕ್ಷ ಬಿ.ಎಂ.ಶ್ರೀಧರ್, ಕಾರ್ಯದರ್ಶಿ ಶಿವಪ್ರಕಾಶ್, ಖಜಾಂಚಿ ರವಿಶಂಕರ್ ಇರಲಿದ್ದಾರೆ ಎಂದು ತಿಳಿಸಿದರು.

ಪಂದ್ಯಾವಳಿಯ ನಿರ್ವಾಹಕ ಹಾಗೂ ಡ್ರೀಮ್ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ನಂದಕಿಶೋರ್ ಮಾತನಾಡಿ, ಪಂದ್ಯಾವಳಿಯಲ್ಲಿ 16 ಜನ ಸಿನಿಮಾ ನಟರು ಪಾಲ್ಗೊಳ್ಳಲಿದ್ದು, ಅವರನ್ನು ವಿಂಗಡಿಸಿ 4 ತಂಡ ರೂಪಿಸಲಾಗುವುದು. ಪ್ರತಿ ತಂಡದಲ್ಲೂ ಪಿಇಟಿಯಲ್ಲಿ ತರಬೇತಿ ಪಡೆಯುತ್ತಿರುವ ಕ್ರಿಕೆಟಿಗರು ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸಿದ ಮಹಿಳಾ ಕ್ರಿಕೆಟಿಗರು ಪಾಲ್ಗೊಳ್ಳುವರು. ಲೀಗ್ ಹಂತದಲ್ಲಿ ಒಟ್ಟು 7 ಪಂದ್ಯ ನಡೆಯಲಿದೆ. ಮೊದಲ ದಿನ 2, ದ್ವಿತೀಯ ಮತ್ತು ತೃತೀಯ ದಿನ ತಲಾ 3 ಪಂದ್ಯ ಇರಲಿದೆ. ರಾಜ್ಯವನ್ನು ಪ್ರತಿನಿಧಿಸಿರುವ ತಾನ್ವಿ, ಲಿಯಾಂಕ ಶೆಟ್ಟಿ, ಕಾವ್ಯಾ, ಹಂಸಾ ಪಾಲ್ಗೊಳ್ಳುವುದನ್ನು ಖಾತ್ರಿಗೊಳಿಸಿದ್ದು, ಇನ್ನಷ್ಟು ಮಹಿಳಾ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಿಇಟಿ ಸಂಸ್ಥೆಯ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಡಾ.ಅನಂತಪದ್ಮನಾಭ ಪ್ರಭು, ಮಾಧ್ಯಮ ಮತ್ತು ಪ್ರಚಾರ ಅಧಿಕಾರಿ ಡಾ.ಕೋದಂಡಪಾಣಿ ಇದ್ದರು.